ಹಾವೇರಿ: ಮುಂದಿನ ದಿನಗಳಲ್ಲಿ ಶಿಗ್ಗಾವಿ ಪ್ರಮುಖ ಕೇಂದ್ರವಾಗಿ ಬೆಳೆಯಲಿದ್ದು, ಜವಳಿ ಪಾರ್ಕ್, ಶಿಕ್ಷಣ ಸಂಸ್ಥೆಗಳು ಬರಲಿವೆ. ಶಿಗ್ಗಾವಿ-ಸವಣೂರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಶಿಗ್ಗಾವಿ ಪಟ್ಟಣದ ಶ್ರೀ ಹನುಮಂತಗೌಡ್ರು ಪಾಟೀಲ ಕಲ್ಯಾಣ ಭವನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹನುಮಂತಗೌಡ್ರು ಪಾಟೀಲ ಅವರು ವ್ಯವಸ್ಥಿತ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದರು. ತಾಲೂಕಿನ ಬಗ್ಗೆ ಅತ್ಯಂತ ಕಳಕಳಿ ಹೊಂದಿದ್ದ ಹನುಮಂತಗೌಡ್ರು ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ. ಜನರ ಸೇವೆ ಮಾಡುವ ಶಕ್ತಿ ನೀಡಲಿ ಎಂದರು.
ಕಾಲ ಬದಲಾಗಿದ್ದು, ಭೂಮಿ ಕಡಿಮೆಯಾಗಿದೆ. ಜೊತೆಗೆ ಅವಲಂಬಿತರು ಹೆಚ್ಚಾಗಿದ್ದಾರೆ. ಈ ಹಿನ್ನೆಲೆ ರೈತಾಪಿ ಮಕ್ಕಳು ಬೇರೆ ಬೇರೆ ಉದ್ಯೋಗ ಮಾಡಿ ಮುಂದೆ ಬರಬೇಕು ಎಂದು ಹೇಳಿದರು.
ಉದ್ಯಮಿ ವಿಜಯ ಸಂಕೇಶ್ವರ ಮಾತನಾಡಿ, ಈ ಕಲ್ಯಾಣ ಮಂಟಪ ಕೇವಲ ಮದುವೆ ಸಮಾರಂಭಗಳಿಗೆ ಸೀಮಿತಗೊಳ್ಳದೇ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕು. ರೈತರು, ಯುವಕರಿಗೆ ಮಾರ್ಗದರ್ಶನ ನೀಡುವ ಚಟುವಟಿಕೆಗಳು ನಡೆಯಬೇಕು ಎಂದರು.
ಈ ವೇಳೆ ಸಂಸದ ಶಿವಕುಮಾರ ಉದಾಸಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಸಿದ್ದಾರ್ಥಗೌಡ್ರು ಪಾಟೀಲ, ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಸುಶೀಲಾ ಪಾಟೀಲ, ವಿಜಯಕುಮಾರ ಕುಲಕರ್ಣಿ, ಬಾಬುಸಾಹೇಬ್ ಪಾಟೀಲ ಇತರರು ಇದ್ದರು.