ಶಿಕ್ಷಕ ಮಂಗೂಣಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

Advertisement

ಹುಬ್ಬಳ್ಳಿ: ೨೦೨೨-೨೩ನೇ ಸಾಲಿನ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಯನ್ನು ಶಿಕ್ಷಣ ಇಲಾಖೆ ಶುಕ್ರವಾರ ಘೋಷಣೆ ಮಾಡಿದ್ದು, ರಾಜ್ಯಮಟ್ಟದಲ್ಲಿ ೨೦ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರಶಸ್ತಿ ನೀಡಿದ್ದು, ಇದರಲ್ಲಿ ಧಾರವಾಡ ಜಿಲ್ಲೆಗೆ ಒಂದು ಪ್ರಶಸ್ತಿ ಘೋಷಣೆಯಾಗಿದೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕಟ್ಟ ಕಡೆಯ ಹಳ್ಳಿ ಬೆನ್ನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ಶಂಕರಪ್ಪ ಮಂಗೂಣಿ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರು ಗ್ರಾಮದವರಾದ ಇವರು ಪ್ರಾಥಮಿಕ ಶಿಕ್ಷಣವನ್ನು ಗ್ರಾಮದಲ್ಲಿ ಪೂರೈಸಿದ್ದಾರೆ. ಸರ್ಕಾರಿ ಶಾಲೆಯಲ್ಲಿಯೇ ವ್ಯಾಸಂಗ ಮಾಡಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ೧೫ ವರ್ಷ ಸೇವೆ ಸಲ್ಲಿಸಿದ್ದಾರೆ. ಸಿಂಧನೂರಿನಲ್ಲಿ ೭ ವರ್ಷ ಹಾಗೂ ಈಗ ಬೆನ್ನೂರಿನಲ್ಲಿ ೮ ನೇ ವರ್ಷದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಯಾಶೀಲ, ಪ್ರಯೋಗಶೀಲ, ಗ್ರಾಮೀಣ ಮಕ್ಕಳ ಶಿಕ್ಷಣ ಏಳಿಗೆಗೆ ಪೂರಕ ಹತ್ತು ಹಲವು ಚಟುವಟಿಕೆ ಸ್ವಯಂ ರೂಪಿಸಿ ಮಕ್ಕಳ ಕಲಿಕೆಯಲ್ಲಿ ಸುಧಾರಣೆ ತಂದಿರುವುದು, ದಾನಿಗಳ ನೆರವಿನಿಂದ, ಹಳೆಯ ವಿದ್ಯಾರ್ಥಿಗಳಿಂದ, ಇಲಾಖೆಯಿಂದ ಲಕ್ಷಾಂತರ ರೂ ಮೊತ್ತದಲ್ಲಿ ಶಾಲೆಗಳಿಗೆ ಭೌತಿಕ ವಸ್ತುಗಳನ್ನು ಪಡೆದುಕೊಂಡು ಅವುಗಳು ಉಪಯುಕ್ತವಾಗಿ ಬಳಕೆಯಾಗುವಂತೆ ಮಾಡಿರುವುದು ಇವರ ಹೆಗ್ಗಳಿಕೆ ಎನ್ನಬಹುದು.
ಕೋವಿಡ್ ಸಂದರ್ಭದಲ್ಲಿ ವಿದ್ಯಾಗಮ ಯೋಜನೆಯಡಿ ಶಾಲೆ ಮಕ್ಕಳ ಶಿಕ್ಷಣ ಸುಧಾರಣೆಗೆ ಅವಿರತ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಶಾಲೆಗೆ ಅತ್ಯುತ್ತಮ ಹಸಿರು ಪ್ರಶಸ್ತಿ ಲಭಿಸಲು, ನಾಲ್ವರು ಮಕ್ಕಳಿಗೆ ಅಸಾಧಾರಣ ಪ್ರತಿಭೆ ಪ್ರಶಸ್ತಿ ಲಭಿಸುವಲ್ಲಿ ಇವರು ಶಾಲೆಯ ಮುಖ್ಯ ಶಿಕ್ಷಕರು, ಸಹಶಿಕ್ಷಕರ ನೆರವಿನಿಂದ ಮಹತ್ವದ ಪಾತ್ರ ವಹಿಸಿದ್ದಾರೆ.
ಪ್ರಭಾರಿ ಶಿಕ್ಷಕರಾಗಿದ್ದ ಒಂದುವರೆ ವರ್ಷದಲ್ಲಿ ೬ ಲಕ್ಷ ಮೊತ್ತದ ಭೌತಿಕ ವಸ್ತುಗಳನ್ನು ದಾನಿಗಳ ನೆರವಿನಿಂದ ಪಡೆದುಕೊಂಡಿದ್ದು, ಇವರು ತಮ್ಮ ಶಾಲೆಯ ಮೂಲಸೌಕರ್ಯಕ್ಕೂ ಅಷ್ಟೇ ಗಮನಹರಿಸಿದ್ದಾರೆ ಎಂಬುದು ತಿಳಿಯುತ್ತದೆ.

ತಂತ್ರಜ್ಞಾನಾಧಾರಿತ ಬೋಧನೆ ಅಳವಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವಲ್ಲಿ ಸದಾ ಪ್ರಯತ್ನಶೀಲರಾಗಿದ್ದಾರೆ. ಈಗ ಇವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿರುವುದು ಇಡೀ ಊರಿಗೆ ಹಿಗ್ಗು ತಂದಿದೆ.


ಪ್ರಶಸ್ತಿಯಿಂದ ಇನ್ನಷ್ಟು ಸ್ಪೂರ್ತಿ
ನಾನು ಸದಾ ಮಕ್ಕಳ ಕಲಿಕಾ ವಿಕಾಸಕ್ಕೆ, ಶಾಲೆಯ ಏಳಿಗೆಗೆ ಒಂದಿಲ್ಲೊಂದು ಚಟುವಟಿಕೆಯಲ್ಲಿರುತ್ತೇನೆ. ನನ್ನ ಪ್ರಯತ್ನಕ್ಕೆ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು, ಎಸ್‌ಡಿಎಂಸಿ, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸದಾ ಬೆನ್ನು ತಟ್ಟಿದ್ದಾರೆ. ನನಗೆ ವಿದ್ಯೆ ಕಲಿಸಿದ ನನ್ನ ಗುರುಗಳಿಗೆ, ಪೋಷಕರಿಗೆ, ವಿದ್ಯಾರ್ಥಿಗಳಿಗೆ, ಮಾರ್ಗದರ್ಶನ ಮಾಡಿದ ಅಧಿಕಾರಿಗಳಿಗೆ, ಶಿಕ್ಷಕರಿಗೆ, ಕುಟುಂಬ ವರ್ಗ, ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಶಸ್ತಿ ಇನ್ನಷ್ಟು ಸ್ಪೂರ್ತಿ ನೀಡಿದೆ.