ದಾವಣಗೆರೆ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಗಮದ ಅಧ್ಯಕ್ಷ, ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರನ ಲಂಚ ಪ್ರಕರಣ ವಿರೋಧಿಸಿ, ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಯದೇವ ವೃತ್ತದಲ್ಲಿ ಕಾಂಗ್ರೆಸ್‌ನ ಪದಾಧಿಕಾರಿಗಳು, ಪಾಲಿಕೆ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಶಾಸಕ ಮಾಡಾಳು ಚಿತ್ರದ ಕ್ಯೂಆರ್ ಕೋಡ್ ಇರುವ ಪೇ ಎಂಎಲ್‌ಎ ಎಂಬ ಭಿತ್ತಿಪತ್ರ, ಅಣಕು ಸೂಟ್ ಕೇಸ್ ಹಿಡಿದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ನಂತರ ಸುಟ್ಟು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಬಿಜೆಪಿ ಸರ್ಕಾರದ ಚನ್ನಗಿರಿಯ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ೪೦ ಲಕ್ಷ ರೂ., ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದು, ಬಿಜೆಪಿ ಶೇ.೪೦ ರಷ್ಟು ಕಮಿಷನ್ ಸರ್ಕಾರ ಎಂಬ ನಮ್ಮ ಆರೋಪಕ್ಕೆ ಈಗ ದಾಖಲೆ ಸಿಕ್ಕಂತಾಗಿದೆ. ಸುಮಾರು ೮ ಕೋಟಿ ರೂ., ದಾಖಲೆ ಸಮೇತ ಶಾಸಕರ ಪುತ್ರನ ಮನೆಯಲ್ಲಿ ಸಿಕ್ಕಿಬಿದ್ದಿದೆ. ಆ ಮೂಲಕ ಇದೊಂದು ಭ್ರಷ್ಟ ಬಿಜೆಪಿ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಮನೆ ಮತ್ತು ಕಚೇರಿಯಲ್ಲಿ ಸುಮಾರು ೮ ಕೋಟಿ ಹಣ ದಾಖಲೆ ಸಮೇತ ಸಿಕ್ಕಿದ್ದು ಇದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ಮಾಡಾಳುವಿನಂತೆ ಸರ್ಕಾರದ ಅನೇಕ ಶಾಸಕರು ಈ ದಂಧೆಯಲ್ಲಿ ತೊಡಗಿದ್ದಾರೆ. ಅವರೆಲ್ಲರ ಮನೆಮೇಲೂ ದಾಳಿ ನಡೆಸಬೇಕು. ಸಿಎಂ ಬಸವರಾಜ್ ಬೊಮ್ಮಾಯಿ ಹೊಣೆಗಾರಿಕೆ ಹೊತ್ತುಕೊಂಡು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಯುವ ಮುಖಂಡ ಹೆಚ್.ಜೆ. ಮೈನುದ್ದೀನ್ ಮಾತನಾಡಿ, ಬಿಜೆಪಿ ಸರ್ಕಾರದ ಶಾಸಕರು, ಸಚಿವರು ಹಗರಣಗಳ ಮೇಲೆ ಹಗರಣ ಮಾಡುತ್ತಿದ್ದು, ಕೋಟ್ಯಾಂತರ ರುಪಾಯಿ ಲೂಟಿ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಪ್ರಧಾನಿ ಮೋದಿ, ಮತ್ತು ಅಮೀತ್ ಷಾ ಅವರು ಕರ್ನಾಟಕಕ್ಕೆ ಆಗಮಿಸಿದ ವೇಳೆ ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತಾಡಲ್ಲ. ಕೇವಲ ಚುನಾವಣೆ ಬಗ್ಗೆ ಮಾತ್ರ ಇವರ ಗಮನ ಇರುತ್ತದೆ. ಇಂತಹ ಸರ್ಕಾರವನ್ನು ಮುಂಬರುವ ಚುನಾವಣೆಯಲ್ಲಿ ಜನರು ಮನೆಗೆ ಕಳಿಸುವುದು ನಿಶ್ವಿತ ಎಂದು ಹರಿಹಾಯ್ದರು. ಪಾಲಿಕೆ ಸದಸ್ಯ ಎ.ನಾಗರಾಜ್, ಪಾಮೇನಹಳ್ಳಿ ನಾಗರಾಜ್, ಪಕ್ಷದ ಪದಾಧಿಕಾರಿಗಳಾದ ಕೆ.ಜಿ. ಶಿವಕುಮಾರ್, ಮಹಮದ್ ಜಿಕ್ರಿಯ, ಜಾನ್, ಯುವರಾಜ್ ಮತ್ತಿತರ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.