ವಿಜಯಪುರ: ಸಹಸ್ರಮಾನದ ಸಂತ, ಜ್ಞಾನಯೋಗಿ, ಭಕ್ತರ ಪಾಲಿನ ಬುದ್ಧಿಜೀ, ನಡೆದಾಡುವ ದೇವರು ಶ್ರೀಸಿದ್ದೇಶ್ವರ ಸ್ವಾಮೀಜಿ(೮೨) ತಮ್ಮ ಸಂಕಲ್ಪದಂತೆ ನಶ್ವರವಾದ ದೇಹವನ್ನು ತ್ಯಜಿಸಿ ಬಯಲಲ್ಲಿ ಬಯಲಾದರು.
ವೈದ್ಯರ ತಂಡ ಸತತ ಪ್ರಯತ್ನ ನಡೆಸಿದರೂ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಬೆಳಿಗ್ಗೆ ಸಾಮಾನ್ಯವಾಗಿದ್ದ ಅವರ ಆರೋಗ್ಯ ಸಂಜೆಯ ವೇಳೆಗೆ ಬಿಗಡಾಯಿಸುತ್ತಾ ಬಂದಿತು. ವೈದ್ಯರು ಕೊನೆ ಹಂತದಲ್ಲಿ ಸಾಕಷ್ಟು ಪ್ರಯತ್ನ ಮಾಡಿದರೂ ಶ್ರೀಗಳು ತಮ್ಮ ಸಂಕಲ್ಪದಂತೆ ದೇಹವನ್ನು ತ್ಯಜಿಸಿ ಶಿವನಲ್ಲಿ ಐಕ್ಯವಾದರು.
ಕಳೆದ ೧೮ ದಿನಗಳಿಂದ ಅನ್ನಾಹಾರ ತ್ಯಜಿಸಿದ್ದು ದೇಹವನ್ನು ಕ್ಷೀಣಿಸಿದ ನಂತರ ತೀವ್ರ ಅಸ್ವಸ್ಥಗೊಂಡಿದ್ದರು.
ಅತ್ಯಂತ ಸರಳ ನಡೆನುಡಿ, ಜ್ಞಾನಪೂರ್ಣವಾದ ಪ್ರವಚನಗಳಿಂದಾಗಿ ಪ್ರಪಂಚದಾದ್ಯಂತ ಅಪಾರ ಭಕ್ತರನ್ನು ಸಂಪಾದಿಸಿದ್ದದ್ದು. ಶ್ರೀಗಳ ಪ್ರವಚನಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುವಂತೆ ಮಾಡಿದ್ದು ಅವರ ಸರಳ ಚುಂಬಕ ವ್ಯಕ್ತಿತ್ವ.
ಬಿಳಿ ಅಂಗಿ, ಬಿಳಿ ಲುಂಗಿಧಾರಿಗಾಗಿರುತ್ತಿದ್ದ ಶ್ರೀಗಳು ಯಾವತ್ತೂ ಕಾವಿ ಧರಿಸಲಿಲ್ಲ. ಜನರಲ್ಲಿನ ಮೌಢ್ಯದ ನಿವಾರಣೆ ಜ್ಞಾನದಿಂದ ಮಾತ್ರ ಸಾದ್ಯ ಎಂದು ನಂಬಿದವರಾಗಿದ್ದರು. ಕಬ್ಬಣದ ಕಡಲೆಯಂತ ಆಧ್ಯಾತ್ಮಿಕ ವಿಷಯಗಳನ್ನು ಅತ್ಯಂತ ಸರಳೀಕರಿಸಿ ಹೇಳುವುದು ಅವರ ಪ್ರವಚನಗಳ ವೈಶಿಷ್ಟ್ಯವಾಗಿತ್ತು.
೧೯೪೧ ರಲ್ಲಿ ಬಿಜ್ಜರಗಿಯಲ್ಲಿ ಜನಿಸಿದ ಸಿದ್ದೇಶ್ವರ ಸ್ವಾಮಿಗಳು ಆಧ್ಯಾತ್ಮ ಕ್ಷೇತ್ರದ ಮಹಾನ್ ಸಂತ. ತಮ್ಮ ೯ನೇ ವರ್ಷದಿಂದ ಆಧ್ಯಾತ್ಮದ ಸೆಳೆತಕ್ಕೊಳಗಾಗಿ ಮನೆ ಬಿಟ್ಟು ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮಿಗಳ ಶಿಷ್ಯತ್ವ ವಹಿಸಿದ ಶ್ರೀಗಳು ತಮ್ಮ ಪ್ರವಚನಗಳಿಂದ ದೇಶ ವಿದೇಶಗಳಲ್ಲಿ ಪ್ರಖ್ಯಾತರು.
ದೇಶದ ಅತ್ಯುನ್ನತ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದ ಶ್ರೀಗಳು ಸನ್ಯಾಸಿಗಳಿಗೆ ಪ್ರಶಸ್ತಿ ಪುರಸ್ಕಾರಗಳು ಶೋಭಿಸಲಾರವು ಎಂದು ಪ್ರಧಾನಿಗೆ ಪತ್ರ ಬರೆದಿದ್ದರು. ವೈರಾಗ್ಯಮೂರ್ತಿಗಳಾಗಿದ್ದ ಶ್ರೀಗಳು ನುಡಿದಂತೆ ನಡೆದ ಸಂತ.
ಬಿಜ್ಜರಗಿಯಲ್ಲಿ ಪ್ರಾಥಮಿಕ ಶಿಕ್ಷಣ, ಚಡಚಣದಲ್ಲಿ ಹೈಸ್ಕೂಲ್, ವಿಜಯಪುರದ ವಿಜಯ ಕಾಲೇಜಿನಲ್ಲಿ ಬಿಎ ಪದವಿ ಪಡೆದ ಶ್ರೀಗಳು ಪುಣೆಯ ಛತ್ರಪತಿ ಶಿವಾಜಿ ಮಹಾರಾಜ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದರು.
ತಮ್ಮ ಇಡೀ ಬದುಕನ್ನು ಜ್ಞಾನ ಪ್ರಸಾರಕ್ಕೆ ಮೀಸಲಿಟ್ಟಿದ್ದ ಶ್ರೀಗಳ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ. ಬ್ಯಾಂಕ್ ಖಾತೆ ಇಲ್ಲ. ಆಶ್ರಮಕ್ಕೆ ಸರ್ಕಾರ ಅನುದಾನ ಘೋಷಿಸಿದಾಗಲೂ ನಿರಾಕರಿಸಿದ್ದು. ಯಾರದೇ ಹಂಗಿಲ್ಲದೆ ಹಕ್ಕಿಯಂತೆ ಬದುಕಿ ತಮ್ಮ ನುಡಿಮುತ್ತುಗಳ ಮೂಲಕ ಬದುಕನ್ನು ಸುಂದರಗೊಳಿಸಿದವರು.
ಸೈನಿಕ ಶಾಲೆಯಲ್ಲಿ ಅಂತಿಮ ದರ್ಶನ
ಜ್ಞಾನಯೋಗಾಶ್ರಮದಲ್ಲಿ ನಸುಕಿನ ೩ ಗಂಟೆ ವರೆಗೆ ದರ್ಶನದ ವ್ಯವಸ್ಥೆ ಮಾಡಲಾಗಿದ್ದು ಆ ನಂತರ ಸೈನಿಕ ಶಾಲೆ ಆವರಣದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.
ಆಶ್ರಮದಲ್ಲಿ ಅಂತಿಮ ಸಂಸ್ಕಾರ
ಸಂಜೆ ೪ ಗಂಟೆಯ ಶ್ರೀಗಳ ಪಾರ್ಥಿವ ದೇಹವನ್ನು ಆಶ್ರಮಕ್ಕೆ ತಂದು ಅವರ ಇಚ್ಛೆಯಂತೆ(ವಿಲ್) ವಿಧಿ ವಿಧಾನಗಳ ಮೂಲಕ ಅಗ್ನಿಸ್ಪರ್ಶ ಮಾಡಲಾಗುವುದು.