ವ್ಯಾಜ್ಯ ಹೆಚ್ಚಿಸುವ ಕೆಲಸ ಮಾಡಬೇಡಿ: ಬೊಮ್ಮಾಯಿ

Advertisement

ಬೆಂಗಳೂರು : ರಾಜ್ಯ ರಾಜ್ಯಗಳ ನಡುವೆ ವ್ಯಾಜ್ಯ ಹೆಚ್ಚಿಸುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿಗಳು ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ
ಗಡಿ ಅಭಿವೃದ್ಧಿ ಪ್ರಾಧಿಕಾರವು ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕೆನ್ನುವ ತೀರ್ಮಾನ ಮಾಡಲಾಗಿದೆ. ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಗೋವಾ ವಿಮೋಚನೆಗೆ ಕೆಲಸ ಮಾಡಿದ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ದಾಖಲೆಗಳನ್ನು ತರಿಸಿ ಅವರಿಗೂ ಪಿಂಚಣಿ ನೀಡುವ ಕೆಲಸವನ್ನು ಕಾರ್ಯಗತ ಮಾಡಲಾಗುವುದು ಎಂದರು.
ಕನ್ನಡಿಗರ ಹಿತರಕ್ಷಣೆ ನಮ್ಮ ಕರ್ತವ್ಯ
ಎರಡು ರಾಜ್ಯಗಳ ನಡುವೆ ಸೌಹಾರ್ದತೆ ಇರುವಾಗ, ಎಲ್ಲಾ ಭಾಷಿಕರನ್ನು ಒಂದೇ ರೀತಿಯಲ್ಲಿ ನೋಡಿಕೊಳ್ಳುವಾಗ, ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕನ್ನಡಿಗರು ಇರುವ ಅವರ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಅದನ್ನು ನಾವು ಮಾಡುತ್ತೇವೆ ಎಂದರು.
ಜತ್ ತಾಲ್ಲೂಕು ಕರ್ನಾಟಕಕ್ಕೆ ಸೇರ್ಪಡೆಗೊಳಿಸಲು ಗಂಭೀರ ಪರಿಗಣನೆ
ಜತ್ ತಾಲ್ಲೂಕಿನಲ್ಲಿ ತೀವ್ರ ಬರಗಾಲವಿದ್ದು ಕುಡಿಯುವ ನೀರಿನ ಸಮಸ್ಯೆ ಇತ್ತು. ನಾವು ನೀರು ಕೊಟ್ಟು ಸಹಾಯ ಮಾಡಬೇಕೆಂದು ಯೋಜನೆಗಳನ್ನು ರೂಪಿಸಿದ್ದೇವೆ. ಜತ್ ತಾಲ್ಲೂಕು ಕರ್ನಾಟಕಕ್ಕೆ ಸೇರಬೇಕೆಂದು ಎಲ್ಲಾ ಗ್ರಾಮ ಪಂಚಾಯಿತಿಗಳು ನಿರ್ಧರಿಸಿದ್ದವು. ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದರು.