ಮಂಡ್ಯ: ಮಂಡ್ಯದ ಆಸ್ಪತ್ರೆ ಸಿಬ್ಬಂದಿಯಿಂದ ಮತ್ತೊಂದು ಎಡವಟ್ಟಾಗಿದ್ದು, ಗ್ಯಾಂಗ್ರಿನ್ ರೋಗಿಗೆ ಶಸ್ತ್ರ ಚಿಕಿತ್ಸೆ ಮಾಡಿದ ನಂತರ ಕತ್ತರಿಸಿದ ಕಾಲನ್ನು ಪತ್ನಿಗೆ ಹಸ್ತಾಂತರ ಮಾಡಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.ಪದೇ ಪದೇ ವಿವಾದಗಳ ಕೇಂದ್ರ ಬಿಂದು ಆಗುತ್ತಿರುವ ಮಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಈ ಎಡವಟ್ಟು ಮಾಡಿದ್ದಾರೆ. ಮಂಡ್ಯದ ಕೀಲಾರ ಗ್ರಾಮದ ಭಾಗ್ಯಮ್ಮನ ಪತಿ ಪ್ರಕಾಶ್ ಗ್ಯಾಂಗ್ರಿನ್ ಖಾಯಿಲೆಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಕಾಶ್ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಪ್ರಕಾಶ್‍ಗೆ ಆಸ್ಪತ್ರೆಯವರು ಕಳೆದ ಮೂರು, ನಾಲ್ಕು ದಿನಗಳಿಂದ ಚಿಕಿತ್ಸೆ ನೀಡುತ್ತಿದ್ದು, ಇಂದು ಶಸ್ತ್ರಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಪ್ರಕಾಶನ ಕಾಲು ಕತ್ತರಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಮುಗಿದ ಬಳಿಕ ಸಿಬ್ಬಂದಿಯು ಕತ್ತರಿಸಿದ ಕಾಲನ್ನು ಪತ್ನಿ ಭಾಗ್ಯಮ್ಮನ ಕೈಗೆ ನೀಡಿ ಎಡವಟ್ಟು ಮಾಡಿದ್ದಾರೆ. ಅಷ್ಟೇ ಅಲ್ಲದೇ ಕತ್ತರಿಸಿದ ಕಾಲನ್ನು ಎಲ್ಲಾದರೂ ಮಣ್ಣು ಮಾಡುವಂತೆ ಭಾಗ್ಯಮ್ಮನಿಗೆ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದಾಗಿ ದಿಕ್ಕು ತೋಚದೆ ತಬ್ಬಿಬ್ಬಾದ ಭಾಗ್ಯಮ್ಮ, ಗಂಡನ ಕಾಲನ್ನು ಹಿಡಿದು ಆಸ್ಪತ್ರೆ ಬಳಿ ಅಳುತ್ತಾ ನಿಂತಿದ್ದರು.