ಹುಬ್ಬಳ್ಳಿ : ವೈದ್ಯಕೀಯ ಸಂಶೋಧನೆಗಳು ಬಡವರಿಗೆ ಎಟಕುವಂತಿರಬೇಕು ಎಂದು ವೈದ್ಯಕೀಯ ಸಂಶೋಧಕರಿಗೆ, ತಜ್ಞರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ನಗರದ ಬೈರಿದೇವರಕೊಪ್ಪದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ಸಂಶೋಧನೆಗಳು ವೆಚ್ಚದಾಯಕವಾಗಿದ್ದರೆ ಬಡವರಿಗೆ ಬಹಳ ಕಷ್ಟವಾಗುತ್ತದೆ. 70 ಸಾವಿರ ರೂ ಒಂದು ಇಂಜೆಕ್ಷನ್ ಎಂದರೆ ಬಡವರು ತೆಗೆದುಕೊಳ್ಳಲು ಸಾಧ್ಯವೆ? ಎಂದು ಪ್ರಶ್ನಿಸಿದರು.
ನಮ್ಮ ಕ್ಲಿನಿಕ್ ಆರಂಭದ ಉದ್ದೇಶ ಬಡವರಿಗೆ ಉತ್ತಮ ಚಿಕಿತ್ಸೆ ಸಿಗಬೇಕು ಎಂಬುದಾಗಿದೆ. ಸಾರ್ವಜನಿಕರು ಅದರ ಪ್ರಯೋಜನ ಪಡೆದುಕೊಳ್ಳಬೇಕು. ರಾಜ್ಯದಲ್ಲಿ 437 ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದ್ದು, ಇಂದು ಆರಂಭಿಕವಾಗಿ 100 ಕ್ಲಿನಿಕ್ ಉದ್ಘಾಟಿಸಲಾಗಿದೆ. ನಮ್ಮದು ಜನಸ್ಪಂದನೀಯ ಸರ್ಕಾರ ಎಂಬುದಕ್ಕೆ ಇದು ಉದಾಹರಣೆ ಎಂದು ತಿಳಿಸಿದರು.
10 ಸಾವಿರ ಕೋಟಿ ಅನುದಾನ : ಆರೋಗ್ಯ ಕ್ಷೇತ್ರಕ್ಕೆ ನಮ್ಮ ಸರ್ಕಾರ 10 ಸಾವಿರ ಕೋಟಿ ಅನುದಾನ ದೊರಕಿಸಿದೆ. ಮುಂದಿನ ಬಜೆಟ್ ನಲ್ಲಿ ಇನ್ನು ಹೆಚ್ಚಿನ ಅನುದಾನ ದೊರಕಿಸಲಿದೆ ಎಂದರು.
ಜನವರಿ ತಿಂಗಳಿಂದ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ನೇತ್ರ ತಪಾಸಣೆ, ಅಗತ್ಯವಿದ್ದರೆ ಉಚಿತ ಶಸ್ತಚಿಕಿತ್ಸೆ ಮಾಡಿಸುವ ಅಭಿಯಾನ ಆರಂಭಿಸಲಾಗುವುದು. ಜನ್ಮತಃ ಕಿವುಡತನ ಹೊಂದಿರುವವರಿಗೆ ಶ್ರವಣ ದೋಷ ಹೋಗಲಾಡಿಸಲು ಕಾಕ್ಲೇರ್ ಇಂಪ್ಲ್ಯಾಂಟ್ ಅಳವಡಿಕೆಗೆ ಸರ್ಕಾರವು ಈಗಾಗಲೇ 500 ಕೋಟಿ ಒದಗಿಸಿದೆ. ರೈತರಿಗಾಗಿ ಯಶಸ್ವಿನಿ ಯೋಜನೆ ಮರು ಜಾರಿಗೊಳಿಸಲಾಗಿದೆ. ಹೈದರಾಬಾದ್ ಕರ್ನಾಟಕದಲ್ಲಿ 42 ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಮಧುಮೇಹ ರೋಗಿಗಳ ಡಯಾಲಿಸಿಸ್ ವೆಚ್ಚ ತಗ್ಗಿಸಲು 30 ಸಾವಿರದಿಂದ 60 ಸಾವಿರ ಸೈಕಲ್ ಉಚಿತ ಡಯಾಲಿಸಿಸ್ ಮಾಡಲು ಘೋಷಿಸಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ವೆಚ್ಚ ಕಡಿಮೆ ಮಾಡಲು ಸರ್ಕಾರವು ನೆರವು ಒದಗಿಸುತ್ತಿದೆ. ವಿಶೇಷವಾಗಿ ಹುಬ್ಬಳ್ಳಿ ನವನಗರದ ಕ್ಯಾನ್ಸರ್ ಆಸ್ಪತ್ರೆಗೆ 10 ಕೋಟಿ ಅನುದಾನವನ್ನು ನೀಡಿ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಸರ್ಕಾರ ನೆರವಾಗಿದೆ ಎಂದು ಹೇಳಿದರು.
ಭವಿಷ್ಯದಲ್ಲಿ 100 ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಗುರಿ ಇದೆ ಎಂದರು. ಆರೋಗ್ಯ ಸಚಿವ ಡಾ.ಕೆ.ಸುದಾಕರ ನಮ್ಮ ಕ್ಲಿನಿಕ್ ಯೋಜನೆಯ ಉದ್ದೇಶ ಕುರಿತು ವಿವರಿಸಿದರು.
ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಮೇಯರ್ ಈರೇಶ ಅಂಚಟಗೇರಿ ಹಾಗೂ ಇತರರು ವೇದಿಕೆಯಲ್ಲಿದ್ದರು.