ವೈದ್ಯಕೀಯ ನಿರ್ಲಕ್ಷ್ಯ: ಪ್ರಸೂತಿ ತಜ್ಞೆಗೆ 11.10 ಲಕ್ಷ ದಂಡ

ಮೆಡಿಕಲ್
Advertisement

ಧಾರವಾಡ: ಮಾಳಮಡ್ಡಿಯ ಪ್ರಶಾಂತ ನರ್ಸಿಂಗ್ ಹೋಮ್‌ನ ಪ್ರಸೂತಿ ತಜ್ಞೆ ವೈದ್ಯಕೀಯ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 11.10 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಶ್ರೀನಗರ ಭಾವಿಕಟ್ಟಿ ಪ್ಲಾಟ್ ನಿವಾಸ ಪ್ರೀತಿ ಘಾಟಗೆ ಎಂಬುವವರು 3 ತಿಂಗಳಿಂದ 9ನೇ ತಿಂಗಳ ವರೆಗೆ ಪ್ರಶಾಂತ ನರ್ಸಿಂಗ್ ಹೋಮ್‌ನ ಪ್ರಸೂತಿ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಅವರ ಬಳಿ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆದಿದ್ದರು. ಪ್ರಸೂತಿ ತಜ್ಞರು 2018ರ ಜು. 12ರಿಂದ 2019ರ ಜ. 8ರ ಅವಧಿಯಲ್ಲಿ 5 ಬಾರಿ ಪ್ರೀತಿಗೆ ಸ್ಕ್ಯಾನ್ ಮಾಡಿ ಗರ್ಭದಲ್ಲಿಯ ಮಗುವಿನ ಬೆಳವಣಿಗೆ ಚೆನ್ನಾಗಿದೆ ಮತ್ತು ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದರು.
ಪ್ರೀತಿಯವರು 9ನೇ ತಿಂಗಳಿನಲ್ಲಿ ಅದೇ ವೈದ್ಯರ ಬಳಿ ತಪಾಸಣೆಗೆ ಹೋದಾಗ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲು ಸಲಹೆ ನೀಡಿದರು. ಆದರೆ, ಹಣಕಾಸಿನ ತೊಂದರೆಯಿಂದ ಅವರ ಬೇರೆ ಖಾಸಗಿ ಆಸ್ಪತ್ರೆಯಲ್ಲಿ 2019ರ ಜ. 31ರಂದು ಹೆರಿಗೆ ಮಾಡಿಸಿಕೊಂಡರು. ಆಗ ಹೆಣ್ಣು ಮಗು ಜನಿಸಿದ್ದು, ಅದರ ಎರಡು ಕಾಲುಗಳು ಅಂಗವಿಕಲತೆಯಿಂದ ಕೂಡಿದ್ದವು.
ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಪ್ರಕಾರ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ ನಿಯಮಾವಳಿ ಪ್ರಕಾರ ಗರ್ಭಧಾರಣೆಯ 18-20 ವಾರಗಳ ಸ್ಕ್ಯಾನಿಂಗ್‌ನಲ್ಲಿ ಮಗುವಿನ ಆರೋಗ್ಯ, ಅದರ ಅಂಗಾಂಗಗಳು ಸರಿಯಾಗಿ ಇವೆಯೋ ಅಥವಾ ಇಲ್ಲವೋ ಎನ್ನುವ ಬಗ್ಗೆ ತಪಾಸಣೆ ಮಾಡಿದ ವೈದ್ಯರಿಗೆ ಗೊತ್ತಾಗುತ್ತದೆ. 2018ರ ಜು. 12ರಿಂದ 2019ರ ಜ. 8ರ ವರೆಗೆ 20 ವಾರಗಳಿಂದ 36 ವಾರಗಳ ಪ್ರೀತಿಯ ಸ್ಕ್ಯಾನಿಂಗ್‌ನ್ನು ಎದುರುದಾರ ಪ್ರಸೂತಿ ತಜ್ಞರು ತೆಗೆದು ನೋಡಿದಾಗ ಅವರಿಗೆ ಮಗುವಿನ ಅಂಗವಿಕಲತೆ ಬಗೆಗೆ ಗೊತ್ತಿದ್ದರೂ ದೂರುದಾರರಿಗೆ ವಿಷಯ ತಿಳಿಸದೇ ಮೋಸ ಮಾಡಿ ವೈದ್ಯಕೀಯ ನಿರ್ಲಕ್ಷ್ಯ ತೋರಿ ತಮಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರಸೂತಿ ತಜ್ಞರ ನಿರ್ಲಕ್ಷ್ಯದಿಂದ ಜನಿಸಿರುವ ಅಂಗವಿಕಲ ಹೆಣ್ಣು ಮಗುವಿನ ಈ ವರೆಗಿನ ಚಿಕಿತ್ಸೆ ಮತ್ತು ಭವಿಷ್ಯದ ಚಿಕಿತ್ಸೆ ಹಾಗೂ ಅದರ ಭವಿಷ್ಯದ ನಿರ್ವಹಣೆಗಾಗಿ ಎದುರುದಾರರು, ವೈದ್ಯಕೀಯ ಖರ್ಚಿಗೆ ೫೦ ಸಾವಿರ, ದೂರುದಾರರ ಓಡಾಟ ಮತ್ತು ಖರ್ಚುವೆಚ್ಚಕ್ಕೆ ೫೦ ಸಾವಿರ, ಅಂಗವಿಕಲ ಮಗುವಿನ ಪಾಲಕರಿಗೆ ಆಗಿರುವ ಮಾನಸಿಕ ನೋವು ಮತ್ತು ಹಿಂಸೆಗೆ ೨ ಲಕ್ಷ, ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯದ ವೈದ್ಯಕೀಯ ಖರ್ಚಿಗಾಗಿ ೩ ಲಕ್ಷ ರೂ. ಮಗುವಿನ ಭವಿಷ್ಯದ ಜೀವನ ನಿರ್ವಹಣೆಗಾಗಿ ೫ ಲಕ್ಷ ರೂ. ಮತ್ತು ಪ್ರಕರಣದ ಖರ್ಚು ಎಂದು ೧೦ ಸಾವಿರ ಸೇರಿ ಒಟ್ಟು ೧೧.೧೦ ಲಕ್ಷ ಪರಿಹಾರ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಲ್ಲಿಸಬೇಕು. ತಪ್ಪಿದಲ್ಲಿ ಒಟ್ಟು ಮೊತ್ತದ ಮೇಲೆ ಶೇ. ೮ರ ಬಡ್ಡಿಯಂತೆ ನೀಡಬೇಕು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.