ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪರವಾಗಿ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಚುನಾವಣಾಧಿಕಾರಿ ಅಶೋಕ ತೇಲಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಸೋಮವಾರ ಮುಂಜಾನೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡ ಬಳಿಕ ಮಧ್ಯಾಹ್ನ ೨ರ ಸುಮಾರಿಗೆ ಚುನಾವಣಾಧಿಕಾರಿಗಳ ಕಚೇರಿಗೆ ಸೂಚಕರೊಂದಿಗೆ ಆಗಮಿಸಿದ ಶಿವಲೀಲಾ ಕುಲಕರ್ಣಿ ಅವರು, ತಮ್ಮ ಪತಿಯ ಪರವಾಗಿ ಚುನಾವಣಾಧಿಕಾರಿ ಅಶೋಕ ತೇಲಿ ಅವರಿಗೆ ನಾಮಪತ್ರ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ವಿನಯ ಕುಲಕರ್ಣಿ ಅವರ ಗೆಲುವು ನಿಶ್ಚಿತ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೋದೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅವರು ದೈಹಿಕವಾಗಿ ಜಿಲ್ಲೆಯಲ್ಲಿ ಇಲ್ಲದಿದ್ದರೂ ಮಾನಸಿಕವಾಗಿ ಜನರೊಂದಿಗೆ ಇದ್ದಾರೆ. ಅವರು ತಮ್ಮ ಅಧಿಕಾರಾವಧಿ ಸಮಯದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯವನ್ನು ಜನರು ಇಂದಿಗೂ ನೆನೆಯುತ್ತಿದ್ದಾರೆ ಎಂದರು.
ಕಳೆದ ಬಾರಿ ತಪ್ಪು ನಿರ್ಧಾರ ಕೈಗೊಂಡು ಪರದಾಡುತ್ತಿದ್ದೇವೆ. ಆದರೆ, ಈ ಬಾರಿ ಸರಿಯಾದ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಜನರು ಹೇಳುತ್ತಿದ್ದಾರೆ ಎಂದ ಅವರು, ಬೆಲೆ ಏರಿಕೆ ಸೇರಿದಂತೆ ನಿತ್ಯದ ಸಮಸ್ಯೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಅದಕ್ಕಾಗಿಯೇ ಈ ಬಾರಿ ಬದಲಾವಣೆ ಬಯಸಿದ್ದಾರೆ. ಈ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಅವರು ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಒಪ್ಪಿಕೊಂಡು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಪಕ್ಷಕ್ಕೆ ಸೇರ್ಪಡೆ ಆಗಿರುವುದು ಆನೆಬಲ ಬಂದಂತಾಗಿದೆ. ಇದೇ ರೀತಿ ಸಾಕಷ್ಟು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಇದು ಪಕ್ಷ ಪ್ರಜಾಪ್ರಭುತ್ವ ನೆಲೆಗಟ್ಟಿನಲ್ಲಿ ನಡೆಯುತ್ತದೆ ಎನ್ನುವುದನ್ನು ತೋರಿಸಿಕೊಟ್ಟಿದೆ ಎಂದರು. ಶಿವಲೀಲಾ ಅವರೊಂದಿಗೆ ಸೂಚಕರಾಗಿ ಸಿದ್ಧಣ್ಣ ಪ್ಯಾಟಿ, ಕಲ್ಲಪ್ಪ ಪುಡಕಲಕಟ್ಟಿ, ವಕೀಲರಾದ ಗಿರೀಶ ಕಲ್ಲಾಪುರ, ಸಿದ್ಧು ಬೆಟಗೇರಿ ಇದ್ದರು.