ಬೆಳಗಾವಿ: ಸುವರ್ಣ ವಿಧಾನಸೌಧದ ವಿಧಾನಸಭೆ ಸದನದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಭಾವಚಿತ್ರ ಅಳವಡಿಸಿದ್ದನ್ನು ವಿರೋಧಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದರು.
ಅತ್ತ ಸದನದಲ್ಲಿ ಸ್ವಾಮಿ ವಿವೇಕಾನಂದ, ಸುಭಾಷ್ಚಂದ್ರ ಬೋಸ್, ಡಾ. ಬಿ.ಆರ್. ಅಂಬೇಡ್ಕರ್, ಬಸವೇಶ್ವರ, ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ ಮತ್ತು ವೀರ ಸಾವರ್ಕರ್‌ರ ಭಾವಚಿತ್ರ ಅಳವಡಿಕೆಯ ಕಾರ್ಯಕ್ರಮ ನಡೆಯುತ್ತಿದ್ದರೆ ಇತ್ತ ಹೊರಗಡೆ ವಿಐಪಿ ಗೇಟ್‌ನಲ್ಲಿ ಕಾಂಗ್ರೆಸ್ ಶಾಸಕರು ಪ್ರತಿಭಟನೆಗೆ ಮುಂದಾದರು.
ಕುವೆಂಪು, ಶಿಶುನಾಳ ಶರೀಫ, ಜಗಜೀವನರಾಮ್, ಮಹರ್ಷಿ ವಾಲ್ಮೀಕಿ, ಕನಕದಾಸರ ಭಾವಚಿತ್ರದ ಪೋಸ್ಟರ್‌ಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ಶಾಸಕರಾದ ಎಚ್.ಕೆ. ಪಾಟೀಲ್, ಯು.ಟಿ. ಖಾದರ್, ಸತೀಶ ಜಾರಕಿಹೊಳಿ, ಅಮರೇಗೌಡ ಬಯ್ಯಾಪುರ, ಪಿ.ಟಿ. ಪರಮೇಶ್ವರ ನಾಯಕ್, ಪ್ರಕಾಶ ರಾಠೋಡ್, ಸಲೀಂ ಅಹ್ಮದ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾದರು.
ಸಾವರ್ಕರ್ ಭಾವಚಿತ್ರಕ್ಕೆ ಆಕ್ಷೇಪವಿಲ್ಲ!
ಸಾವರ್ಕರ್ ಭಾವಚಿತ್ರ ಅಳವಡಿಕೆಗೆ ನಮ್ಮ ಅಭ್ಯಂತರವಿಲ್ಲ, ಆದರೆ ಅವರ ಫೋಟೊ ಜೊತೆ ಇತರೆ ಮಹನೀಯರ ಫೋಟೊಗಳನ್ನು ಕೂಡ ಸದನದಲ್ಲಿ ಅಳವಡಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಪಕ್ಷದ ಶಾಸಕರೊಂದಿಗೆ ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಅವರು, ʻಇದು ಪ್ರತಿಭಟನೆಯಲ್ಲ, ಬೇಡಿಕೆಯಾಗಿದೆ. ವಾಲ್ಮೀಕಿ, ಕನಕದಾಸ, ನಾರಾಯಣಗುರು ಮತ್ತಿತರ ಮಹನೀಯರ ಫೋಟೊಗಳನ್ನೂ ಹಾಕಿ’ ಎಂದು ಒತ್ತಾಯಿಸಿದರು.
ಫೋಟೊ ಹಾಕಲು ಸದನವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಬಿಎಸಿಯಲ್ಲಿ ಕೂಡ ಚರ್ಚೆಯಾಗಿಲ್ಲ. ದಿಢೀರನೆ ಭಾವಚಿತ್ರ ಅಳವಡಿಸಿದ್ದಾರೆ. ಇಷ್ಟಕ್ಕೂ ಭಾವಚಿತ್ರ ಅಳವಡಿಕೆ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ನೀಡಿಲ್ಲ. ಮಾಧ್ಯಮಗಳ ಮೂಲಕವೇ ವಿಷಯ ಗೊತ್ತಾಯಿತು. ಯಾರದೇ ಫೋಟೊ ಹಾಕುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಚರ್ಚೆಯಾಗದೇ ಹಾಕಿರುವುದಕ್ಕೆ ವಿರೋಧವಿದೆ.
ನಾವು ಅನೇಕ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರಗಳಂಥ ವಿಷಯಗನ್ನು ಡೈವರ್ಟ್ ಮಾಡಲು ಇಂಥ ಫೋಟೊ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಟೀಕಿಸಿದರು.