ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಶನಿವಾರ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ, ರಾಜಕಾರಣದ ಚಾಣಾಕ್ಷ ಅಮಿತ್ ಶಾ ಮಂಗಳೂರಿನಲ್ಲಿ ಬಿಜೆಪಿ ಪ್ರಮುಖರೊಂದಿಗೆ ಮಹತ್ವದ ಸಭೆ ನಡೆಸುವ ಮೂಲಕ ಮುಂಬರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಸಿದ್ಧರಾಗುವಂತೆ ಸಂದೇಶ ರವಾನಿಸಿದ್ದಾರೆ. ಚುನಾವಣೆಯ ಸಂದರ್ಭವೇ ಜಿಲ್ಲೆಗೆ ಶಾ ಭೇಟಿ ನೀಡಿರುವುದು ಬಿಜೆಪಿ ಪಾಳಯದ ಬಲ ಹೆಚ್ಚಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹಿರಿಯ ನಾಯಕ ಕೆ. ಎಸ್. ಈಶ್ವರಪ್ಪ ಮುಂತಾದವರನ್ನೊಳಗೊಂಡಂತೆ ನಗರದ ಹೊರವಲಯದ ಕೆಂಜಾರಿನ ಶ್ರೀದೇವಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಸಭೆ ನಡೆಸಿರುವ ಅಮಿತ್ ಶಾ ಅವರು ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಪ್ರತಿ ಮನೆಯನ್ನು ಕೇಂದ್ರೀಕರಿಸಿ ಪ್ರಚಾರ ಆರಂಭಿಸಬೇಕು. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಕಾರ್ಯೋನ್ಮುಖವಾಗುವಂತೆ ಸೂಚಿಸಿದ್ದಾರೆ.
ಸುಮಾರು ೯೦ ನಿಮಿಷ ಮಂಗಳೂರು ಹಾಗೂ ಶಿವಮೊಗ್ಗ ವಿಭಾಗದ ಆರು ಜಿಲ್ಲೆಗಳ ಪ್ರಮುಖರೊಂದಿಗೆ ಸಭೆ ನಡೆಸಿ ಸದ್ಯದ ರಾಜಕೀಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದ ಅವರು ಬಿಜೆಪಿಗೆ ಅಧಿಕ ಸ್ಥಾನ ಬರುವಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸುವುದರೊಂದಿಗೆ ಮನೆ ಮನೆ ಭೇಟಿಗೆ ಪ್ರಧಾನ ಆದ್ಯತೆ ನೀಡುವಂತೆ ಸಲಹೆ ನೀಡಿದ್ದಾರೆ.
ಮಿನಿ ರೋಡ್ ಶೋ..
ಅಮಿತ್ ಶಾ ಮಂಗಳೂರು ವಿಮಾನ ನಿಲ್ದಾಣದ ಹೊರಗೆ ಮಿನಿ ರೋಡ್ ಶೋ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ಹಿರಿಯ ನಾಯಕರು ತೆರೆದ ಜೀಪಿನಲ್ಲಿ ವಿಮಾನ ನಿಲ್ದಾಣದ ನಿರ್ಗಮನ ದ್ವಾರದಿಂದ ಸುಮಾರು ೨೦೦ ಮೀಟರ್ ದೂರದವರೆಗೆ ರೋಡ್ ಶೋ ನಡೆಸಿದರು. ಅಮಿತ್ ಶಾರನ್ನು ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರ ನಾಯಕನನ್ನು ಎದುರುಗೊಳ್ಳಲು ಒಟ್ಟು ಸೇರಿದ್ದರು. ಭಾರತ್ ಮಾತಾಕೀ ಜೈ, ಅಮಿತ್ ಶಾ ಕೀ, ಜೈ, ಮೋದಿಜೀ ಕೀ ಜೈ ಜಯಕಾರ ಮುಗಿಲು ಮುಟ್ಟಿತ್ತು.
ಅಮಿತ್ ಶಾ ಅವರ ರೋಡ್ ಶೋ ಈ ಹಿಂದೆ ಕಾವೂರಿನಿಂದ ಪದವಿನಂಗಡಿವರೆಗೆ ನಿಗದಿಯಾಗಿತ್ತು. ಆದರೆ ಪದವಿನಂಗಡಿ ಕೊರಗಜ್ಜ ದೈವಸ್ಥಾನದ ಕೋಲ ಇದ್ದುದರಿಂದ ಭದ್ರತಾ ಕಾರಣಗಳಿಂದ ರೋಡ್ ಶೋ ರದ್ದುಗೊಳಿಸಲಾಗಿತ್ತು.
ಧರ್ಮಸ್ಥಳದ ಪ್ರಸಾದ..
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯೂ ಆಗಿರುವ ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗೃಹ ಸಚಿವ ಅಮಿತ್ ಶಾರಿಗೆ ನೀಡುವಂತೆ ಮಂಜುನಾಥನ ಪ್ರಸಾದವನ್ನು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಕೆ. ಎಸ್. ಈಶ್ವರಪ್ಪರಲ್ಲಿ ನೀಡಿದ್ದು, ಸಭೆಯಲ್ಲಿ ಪ್ರಸಾದವನ್ನು ಈಶ್ವರಪ್ಪ ಅಮಿತ್ ಶಾಗೆ ನೀಡಿದರು.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಮುಂದಿನ ಒಂದು ತಿಂಗಳಲ್ಲಿ ಸರ್ಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸಬೇಕು,ಮತ್ತೆ ತಿಂಗಳ ನಂತರದ ಬಂದು ಇನ್ನೊಮ್ಮೆ ಪರಿಶಿಲನೆ ನಡೆಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಅಭ್ಯರ್ಥಿ ವಿಚಾರವಾಗಿ ವಿಭಾಗ ಪ್ರಮುಖರ ಸಭೆಯಲ್ಲಿ ಯಾವುದೆ ಚರ್ಚೆ ಆಗಿಲ್ಲ ಎಂದರು.
ಸಂಸದ ಪ್ರತಾಪ ಸಿಂಹ ಮಾತನಾಡಿ, ಮಂಗಳೂರು, ಶಿವಮೊಗ್ಗ ವಿಭಾಗದ ೩೩ ವಿಧಾನಸಭಾ ಕ್ಷೇತ್ರಗಳಲ್ಲಿ ೨೯ರಲ್ಲಿ ಬಿಜೆಪಿ ಇದೆ. ಅದನ್ನು ಉಳಿಸಿಕೊಂಡು ಉಳಿದ ನಾಲ್ಕು ಕ್ಷೇತ್ರ ಗೆಲ್ಲಲು ಅಮಿತ್ ಶಾ ಮಾರ್ಗದರ್ಶನ ನೀಡಿದ್ದಾರೆ. ಟಿಕೆಟ್ ಏನೂ ಚರ್ಚೆ ಆಗಿಲ್ಲ ಎಂದರು. ಹಿರಿಯ ನಾಯಕ ಕೆ. ಎಸ್. ಈಶ್ವರಪ್ಪ ಮಾತನಾಡಿ, ಮುಂದಿನ ಚುನಾವಣೆಯನ್ನು ಯಾವ ರೀತಿ ಗೆಲ್ಲಬೇಕು ಅಂತ ಅಮಿತ್ ಶಾ ಮಾರ್ಗದರ್ಶನ ಮಾಡಿದ್ದು, ಅದೇ ರೀತಿ ಮುಂದುವರಿಯಲಿದ್ದೇವೆ. ೧೫೦ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ. ಟಿಕೆಟ್ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ತಿಳಿಸಿದರು. ಸಚಿವ ಸುನೀಲ್ ಕುಮಾರ್ ಮಾತನಾಡಿ, ಮಂಗಳೂರು, ಶಿವಮೊಗ್ಗ ವಿಭಾಗದ ೩೩ ಸ್ಥಾನಗಳ ಪೈಕಿ ೨೯ ಸ್ಥಾನಗಳಲ್ಲಿ ಬಿಜೆಪಿ ಶಾಸಕರಿದ್ದಾರೆ, ಈ ೨೯ ಸ್ಥಾನವನ್ನು ಉಳಿಸಿಕೊಳ್ಳುವುದರ ಜತೆಗೆ ಉಳಿದ ೪ ಸ್ಥಾನಗಳನ್ನೂ ಗೆಲ್ಲುವ ದಿಸೆಯಲ್ಲಿ ಅಮಿತ್ ಶಾ ಮಾರ್ಗದರ್ಶನ ನೀಡಿದರು ಎಂದರು. ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಎಸ್.ಟಿ.ಸೋಮಶೇಖರ್, ಡಿ. ವಿ. ಸದಾನಂದ ಗೌಡ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ.,, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಮೊದಲಾದವರಿದ್ದರು.