ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯದ ಕಾಲುವೆಗಳು ಮುಚ್ಚಿಹೋಗಿದ್ದು, ಅವುಗಳ ಆಧುನೀಕರಣಕ್ಕಾಗಿ 738 ಕೋಟಿ ರೂ.ಗಳನ್ನು ನೀಡಲಾಗಿದೆ. ಕಾಲುವೆಗಳನ್ನು ನವೀಕರಣಗೊಳಿಸುವ ಮೂಲಕ ರೈತರ ಕೃಷಿಗೆ ಸಹಕರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಬಿಜೆಪಿ ವತಿಯಿಂದ ಇಂದು ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ವಾಣಿ ವಿಲಾಸ ಸಾಗರ ಜಲಾಶಯದ ನಿರ್ವಹಣೆ ಯೋಜನೆಯಡಿ 20 ಕೋಟಿ ರೂ. ನೀಡಲಾಗಿದ್ದು, ವಾಣಿ ವಿಲಾಸ ಸಾಗರ ಜಲಾಶಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಾಣಿ ವಿಲಾಸಸಾಗರ ಜಲಾಶಯ ಪ್ರವಾಸಿ ಆಕರ್ಷಣೆಯಾಗಿದ್ದು, ಸುಂದರ ಉದ್ಯಾನವನ್ನು ನಿರ್ಮಿಸಲು ಅನುಮತಿಯನ್ನು ಸರ್ಕಾರ ನೀಡಲಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ 5 ಟಿಎಂಸಿ ನೀರನ್ನು ಖಾಯಂ ಆಗಿ ಒದಗಿಸಲು ಆದೇಶ ನೀಡಲಾಗುವುದು ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆ :
ಈ ಭಾಗದ ಜನರು 2007 ಹಾಗೂ 2008ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 580 ದಿನಗಳ ಸುದೀರ್ಘ ಹೋರಾಟ ನಡೆಸಿದ್ದರು. ಹಿಂದಿನ ಸರ್ಕಾರಗಳು ಈ ಹೋರಾಟವನನ್ನು ನಿರ್ಲಕ್ಷಿಸಿದ್ದರು. ನಮ್ಮ ನಾಯಕರಾದ ಯಡಿಯೂರಪ್ಪ ಅವರ ಸರ್ಕಾರದಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿಸಿ , ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಜಿಲ್ಲೆಯ ಜನರಿಗೆ ಭದ್ರಾ ಮೇಲ್ದಂಡೆಯಿಂದಲೂ ನೀರು ಒದಗಿಸುವ ಹಾಗೂ ವಾಣಿವಿಲಾಸ ಸಾಗರಕ್ಕೆ ನೀರು ಬಿಡಿಸುವ ಭರವಸೆಯನ್ನು ಈಡೇರಿಸಲಾಗಿದೆ. ರಾಜ್ಯದಲ್ಲಿ ನಿಸರ್ಗದ, ಜಲದ ಹಾಗೂ ಜನರ ಸಂಪನ್ಮೂಲಗಳಿದ್ದು, ಸ್ಪಷ್ಟವಾದ ಅಭಿವೃದ್ಧಿಯ ಹಾದಿಯಲ್ಲಿ ನಡೆಯಲು ದಿಟ್ಟ ನಾಯಕತ್ವ ಬೇಕಿದೆ ಎಂದರು.
ಹಿರಿಯೂರು ತಾಲ್ಲೂಕಿನ ಅಭಿವೃದ್ಧಿಗೆ ಬದ್ಧ :
ಈ ಪ್ರದೇಶದಲ್ಲಿ ಸುಮಾರು 500 ಕೋಟಿಗಿಂತಲೂ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಯುಜಿಡಿ ಯೋಜನೆಯಡಿ 208 ಕೋಟಿ ರೂ. ನಿಗದಿಪಡಿಸಿದ್ದು, ಮೊದಲನೇ ಹಂತದಲ್ಲಿ 104 ಕೋಟಿ ರೂ.ಗಳನ್ನು ಮಂಜೂರಾತಿ ನೀಡಲಾಗಿದೆ. ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ, ಚಳ್ಳಕೆರೆ ಸೇರಿದಂತೆ ಎಲ್ಲ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಹನಿ ನೀರಾವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು, 1 ಲಕ್ಷ ಹೆಕ್ಟೆರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುವುದು. ಈ ಭಾಗದಲ್ಲಿ ಇಸ್ರೋ, ಐಐಟಿ ಇದೆ. ಇಸ್ರೋ ಸಂಸ್ಥೆ ಮರುಬಳಕೆಯಾಗಬಹುದಾದ ರಾಕೆಟ್ ಲ್ಯಾಂಡಿಂಗ್ ಪ್ರಯೋಗವನ್ನು ಚಳ್ಳಕೆರೆಯ ಘಟಕದಲ್ಲಿ ನಡೆಸಲು ಕ್ರಮ ಕೈಗೊಳ್ಳುತ್ತಿದೆ. ಇಸ್ರೋ ಘಟಕದ ಸ್ಥಾಪನೆಗೆ ಭೂಮಿಯನ್ನು ಯಡಿಯೂರಪ್ಪನವರ ಸರ್ಕಾರ ನೀಡಿದೆ.
ಚಿತ್ರದುರ್ಗದಲ್ಲಿ 1000 ಎಕರೆಯ ಇಂಡಸ್ಟ್ರಿಯಲ್ ಟೌನ್ಶಿಪ್ :
ಚಿತ್ರದುರ್ಗದಲ್ಲಿ 1000 ಎಕರೆಯ ಇಂಡಸ್ಟ್ರಿಯಲ್ ಟೌನ್ಶಿಪ್ ಮಾಡಲು ಸ್ಥಳವನ್ನು ಗುರುತಿಸಲಾಗಿದೆ. ಈ ಕಾಮಗಾರಿಯನ್ನು ಮುಂದಿನ ಜನವರಿಯಲ್ಲಿ ಪ್ರಾರಂಭಿಸಲಾಗುವುದು. ಈ ಯೋಜನೆಯಿಂದ ಆರ್ಥಿಕ ಬದಲಾವಣೆ, ಕೈಗಾರಿಕಾ ಆಬಿವೃದ್ಧಿ, ಯುವಕರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ. ಚಿತ್ರದುರ್ಗದ ಮೂಲಕ ತುಮಕೂರು – ದಾವಣಗೆರೆ ರೈಲು ಯೋಜನೆಗೆ ಬೇಕಾದ ಅನುದಾನವನ್ನು ಒದಗಿಸಲಾಗುತ್ತಿದ್ದು, ಮುಂದಿನ ಮಾರ್ಚ್ ಒಳಗೆ ಯೋಜನೆಗೆ ಅಡಿಗಲ್ಲು ಹಾಕಲಾಗುವುದು. ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯಿದ್ದು, ಕಾರ್ಯನಿರ್ವಹಿಸುತ್ತಿಲ್ಲ. ಇದರ ಪುನಶ್ಚೇತನಕ್ಕೆ ಬೇಡಿಕೆ ಇತ್ತು. ನೀರಾವರಿ ಹೆಚ್ಚಿಸಿ, ಕಬ್ಬು ಬೆಳೆದು ಸಕ್ಕರೆ ಉತ್ಪಾದನೆ , ಎಥನಾಲ್ ಉತ್ಪಾದನೆಯಿಂದ ರೈತರಿಗೆ ಅನುಕೂಲವಾಗುತ್ತದೆ. ಇದರ ಬಗ್ಗೆ ತಜ್ಞರ ಸಮಿತಿಯನ್ನು ಈ ಪ್ರದೇಶಕ್ಕೆ ಕಳುಹಿಸಿ, ಅವರ ಅಭಿಪ್ರಾಯದಂತೆ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಶಾಸಕರಾದ ಪೂರ್ಣಿಮಾ ಶ್ರೀನಿವಾಸ, ಎಂ. ಚಂದ್ರಪ್ಪ, ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಮತ್ತಿತರರು ಹಾಜರಿದ್ದರು.