ಕಲಬುರಗಿ: ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ವರ್ಗಾವಣೆಗಳನ್ನು ಈ ಕೂಡಲೇ ತಡೆಹಿಡಿಯಬೇಕು. ಸ್ಯಾಂಟ್ರೋ ರವಿ ಪಾತ್ರದ ಬಗ್ಗೆ ತನಿಖೆ ನಡೆಸಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಕರ್ನಾಟಕ ತನ್ನ ಪ್ರಗತಿಪರತೆಗೆ ಹೆಸರಾಗಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದಿಂದಾಗಿ ಕುಖ್ಯಾತಿ ಪಡೆಯುತ್ತಿದೆ ಎಂದು ಪ್ರಿಯಾಂಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಪಕ್ಷ ಬ್ರೋಕರ ಜನತಾ ಪಕ್ಷವಾಗಿದೆ. ಅದರ ಅಡಿಯಲ್ಲಿ ವಿಧಾನಸೌಧವನ್ನು ಬಿಗ್ಗೆಸ್ಟ್ ಮಾಲ್ ಆಗಿ ಪರಿವರ್ತನೆ ಮಾಡಲಾಗಿದೆ. ಕಾಮಗಾರಿ ಖರೀದಿ, ಉದ್ಯೋಗ ಖರೀದಿ, ವರ್ಗಾವಣೆ ಸೇರಿದಂತೆ ಪ್ರಮುಖ ವ್ಯವಹಾರಗಳು ನಡೆಯುತ್ತಿವೆ. ಇದನ್ನು ನಡೆಸಲು ಬೆಸ್ಟ್ ಸೇಲ್ಸಮೆನ್ಗಳು ಕೂಡಾ ಇದ್ದಾರೆ.
ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಸೆಲ್ಸಮೆಲ್ ಆಗಿದ್ದಾರೆ. ಒಬ್ಬ ಎಂಎಲ್‌ಎ ಪಿಎಸ್ ಐ ನೇಮಕಾತಿಗೆ ಸಂಬಂಧಿಸಿದಂತೆ ರೋಲ್ ಕಾಲ್ ಮಾಡಿದ್ದಾರೆ. ಇತ್ತೀಚೆಗೆ ಒಬ್ಬ ಜೆಇ ಹತ್ತು ಲಕ್ಷ ಹಣದ ಬ್ಯಾಗ್ ನೊಂದಿಗೆ ಸಿಕ್ಕಿ ಬಿದ್ದಿದ್ದಾರೆ. ಇವರಿಗೆ ಅದೇಗೆ ಧೈರ್ಯ ಬಂತು? ಹಣ ಯಾರಿಗೆ ಕೊಡಲುತೆಗೆದುಕೊಂಡುಹೋಗುತ್ತಿದ್ದ ? ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸಿಎಂ ಹೈಕಮಾಂಡ್ ಗೆ ಮಧ್ಯಮರ್ತಿ, ಎಂಎಲ್ ಎ ಗಳು ಸಚಿವರಿಗೆ ಮಧ್ಯವರ್ತಿಗಳು. ಅಧಿಕಾರಿಗಳು ಎಂಎಲ್‌ಎ ಗಳಿಗೆ ಮಧ್ಯವರ್ತಿಗಳಾಗಿದ್ದಾರೆ. ಜೊತೆಗೆ ಇನ್ನೂ ಕೆಲವು ರೌಡಿಗಳು ಕೂಡಾ ಮಧ್ಯವರ್ತಿಗಳಾಗಿದ್ದಾರೆ. ಇದನ್ನು ನೋಡಿದರೆ ಸಿಎಂ ಸರ್ಕಾರ ನಡೆಸುತ್ತಿದ್ದಾರೆ ಎನಿಸುತ್ತಿಲ್ಲ. ಸರ್ಕಾರದಲ್ಲೂ ರೌಡಿ ಮೋರ್ಚಾ ಓಪನ್ ಮಾಡಿದ್ದಾರೆ. ಸ್ಯಾಂಟ್ರೋ ರವಿ ಎನ್ನುವವನು ಸಿಎಂ ಗೆ ಹತ್ತಿರದವನಾಗಿದ್ದಾನೆ. ಈತ ಆಡಿಯೋ ಒಂದರಲ್ಲಿ ತಾನು ಅಧಿಕಾರಿಗಳ ವರ್ಗಾವಣೆ ಮಾಡಿಸುತ್ತೇನೆ ಎಂದಿದ್ದಾನೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಅವರು ಒತ್ತಾಯಿಸಿದರು.
ಈತ ಸಿಎಂ ಜೊತೆ, ಅವರ ಕುಟುಂಬದವರಲ ಜತೆ ಹಾಗೂ ಸಚಿವರೊಂದಿಗೆ ಕೂಡಾ ಇದ್ದಾರೆ. ಇದನ್ನು ನೋಡಿದರೆ ಬಿಜೆಪಿಯವರು ಅಧಿಕಾರ ಹಿಡಿಯಲು ಯಾರ ಯಾರ ಕಾಲು ಹಿಡಿದಿದ್ದಾರೆ ಎನಿಸುತ್ತಿದೆ. ಇದೆನಾ ಆಡಳಿತ ನಡೆಸುವ ರೀತಿ? ಎಲ್ಲಿಗೆ ಹೋಯ್ತು ಕರ್ನಾಟಕದ ಗೌರವ. ಯಾರು ಕಂಬಿ ಎಣಿಸಬೇಕಿತ್ತೋ ಅವರು ಕುಮಾರಕೃಪಾದಲ್ಲಿ ಕುಳಿತು ಡೀಲ್ ಮಾಡುತ್ತಿದ್ದಾರೆ. ಕೆಲ ಪ್ರಶ್ನೆಗಳಿಗೆ ಸಿಎಂ ಅಥವಾ ಹೋಂ ಮಿನಿಸ್ಟರ್ ಉತ್ತರ ಕೊಡಬೇಕು. ಮಾಜಿ ಸಿಎಂ ಒಬ್ರು ಹೇಳುತ್ತಾರೆ ರವಿ ಮೂಲಕ ಮೈತ್ರಿ ಸರ್ಕಾರ ಬೀಳಿಸಿದ್ದಾರೆ ಎಂದಿದ್ದಾರೆ. ಈ ಹಿಂದಿನ ಸತ್ಯಾಂಶ ಜನರಿಗೆ ಬಿಜೆಪಿ ತಿಳಿಸಲಿ ಎಂದು ಅವರು ಆಗ್ರಹಿಸಿದರು.
ಈ ಬಗ್ಗೆ ಮಾತನಾಡಬೇಕಿದ್ದ ಬಿಜೆಪಿ ಅಧ್ಯಕ್ಷ ಕಟೀಲ್ ಯಾಕೆ ಮಾತನಾಡುತ್ತಿಲ್ಲ. ಭ್ರಷ್ಟಾಚಾರ ಹಗರಣ ಬಂದಾಗ ಅವರ ಬಾಯಿ ಬಂದ್ ಆಗುತ್ತದೆ. ರವಿಗೆ ಕುಮಾರ ಕೃಪಾದಲ್ಲಿ ಇರಲು ಅವಕಾಶ ಕೊಟ್ಟಿದ್ದು ಯಾರು ? ಈ ಬಗ್ಗೆ ಸತ್ಯಾಂಶ ಹೊರಬರಲಿ. ಪೊಲೀಸ್ ಅಧಿಕಾರಿಗಳು ರವಿಗೆ ಫೋನ್ ಮಾಡಿ ವರ್ಗಾವಣೆಗೆ ಕೇಳುತ್ತಿದ್ದಾರೆ. ತನಿಖಾ ಸಂಸ್ಥೆಗಳು ಯಾಕೆ ಸುಮ್ಮನಿವೆ. ತನಿಖಾ ಸಂಸ್ಥೆಗಳು ಕೇವಲ ಕಾಂಗ್ರೆಸ್ ನಾಯಕರ ವಿರುದ್ದ ಮಾತ್ರವೇ? ಈ ಬಗ್ಗೆ ಸ್ವಯಂಪ್ರೇರಿತ ದೂರು ಯಾಕೆ ದಾಖಲಿಸಿಕೊಳ್ಳುತ್ತಿಲ್ಲ.? ಗೃಹ ಸಚಿವರಿಗೆ ಯಾರು ತಡೆಯುತ್ತಿದ್ದಾರೆ? ಎಂದು ಖರ್ಗೆ ಪ್ರಶ್ನಿಸಿದರು.
ಸರ್ಕಾರ ಈ ಕೂಡಲೇ ಎಲ್ಲ ಇಲಾಖೆಗಳ ವರ್ಗಾವಣೆ ನಿಲ್ಲಿಸಿ ತನಿಖೆ ನಡೆಸಬೇಕು. ಬಿಜೆಪಿಯವರು ಭ್ರಷ್ಟಾಚಾರ ಮಾಡುವುದಿಲ್ಲ ನಾ ಖಾವೂಂಗಾ ನಾ ಖಾನೇದೂಂಗಾ ಎನ್ನುವ ಮೋದಿ ಮಾತಿನಂತೆ ನಡೆಯುತ್ತೇವೆ ಎನ್ನುವವರು ಈ ಪ್ರಕರಣವನ್ನು ಸಿಬಿಐಗೆ ಕೊಡಲಿ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದರು.
ಬೇಲ್ ಸಿಕ್ಕಿದ್ದಕ್ಕೆ ಕಿಡಿ
ಪಿಎಸ್ಐ ನೇಮಕಾತಿ ಪರೀಕ್ಷಾ ಹಗರಣದ ಪ್ರಮುಖರಿಗೆ ಜಾಮೀನು ಸಿಕ್ಕಿರುವುದರ ಬಗ್ಗೆ ಕಿಡಿಕಾರಿದ ಖರ್ಗೆ ಎಂತ ಸರ್ಕಾರಿ ವಕೀಲರನ್ನು ನೇಮಿಸಿದ್ದೀರಿ? ಸಾವಿರಾರು ಅಭ್ಯರ್ಥಿಗಳ ಭವಿಷ್ಯದ ಮೇಲೆ ಕಲ್ಲು ಹಾಕಿದವರಿಗೆ ಬೇಲ್ ಸಿಗುತ್ತಿದೆ ಎಂದರೆ ಹೇಗೆ? ಜೆಪಿ ನಡ್ಡಾ ಈ ರಾಜ್ಯದಲ್ಲಿ ತಿರುಗುತ್ತಿದ್ದಾರೆ. ಈ ಬಗ್ಗೆಯೂ ಗಮನ ಹರಿಸಲಿ ಎಂದರು.
ಕೆಡಿಪಿ ಸಭೆ ಮುಂದೂಡಿಕೆಗೆ ಆಕ್ರೋಶ
ಪದೇ ಪದೇ ಕೆಡಿಪಿ ಮುಂದೂಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ ಖರ್ಗೆ ಅವರು ಜಿಲ್ಲಾಡಳಿತಕ್ಕೆ ಕೆಡಿಪಿ ಹೇಗೆ ನಡೆಸಬೇಕು ಎನ್ನುವುದು ತಿಳಿದಿದೆಯೋ ಹೇಗೆ ಗೊತ್ತಿಲ್ಲ. ಆರು ದಿನಗಳ ಹಿಂದೆ ಕೆಡಿಪಿ ನಡೆಸುವುದಾಗಿ ಹೇಳಿ ನೋಟಿಸು ಕೊಟ್ಟು ಇಂದು ನಿಗದಿ ಮಾಡಲಾಗಿತ್ತು. ಆದರೆ ಈಗ ಏಕಾಏಕಿ ನಾಳೆಗೆ ಮುಂದೂಡಲಾಗಿದೆ. ಇದನ್ನು ಗಮನಸಿದರೆ ಕಾಟಾಚಾರದ ಸಭೆ ಕರೆಯುತ್ತಿದ್ದಾರೆ ಎನಿಸುತ್ತದೆ. ಈ ಕೆಡಿಪಿಗೆ ನಾವು ಹೋಗಬೇಕಾ ಅಥವಾ ಬೇಡವಾ ಗೊತ್ತಾಗುತ್ತಿಲ್ಲ. ಕೇವಲ ಬಿಜೆಪಿಗರಿಗೆ ಅಥವಾ ಸಚಿವರಿಗೆ ಮಾತ್ರ ಕೆಲಸವಿದೆ ನಮಗೆ ಇಲ್ಲವಾ? ಎಂದು ಪ್ರಿಯಾಂಕ್ ಕೇಳಿದರು.
ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಾಡಿ ಎಂದರೆ ವಿದೇಶಿ ಪ್ರವಾಸಕ್ಕೆ ಹೋಗಲು ರೆಡಿಯಾಗಿದ್ದಾರೆ. ಅದರಂತೆ ಟ್ರಾವೆಲಿಂಗ್ ಏಜೆನ್ಸಿಯರಿಗೆ ಈಗಾಗಲೇ ಕೆಕೆಆರ್ಡಿಬಿ ಯಿಂದ ಒಂದು ಕೋಟಿ ಹಣ ಜಮಾ ಆಗಿದೆ. ತೊಗರಿ ನೆಟೆರೋಗದ ಬಗ್ಗೆ ಚರ್ಚೆ ಮಾಡಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ಏನಾದರೂ ಮಾಡಿಕೊಳ್ಳಲಿ ಮುಂದಿನ ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಯಲಿದೆ ನಾವು ಜನರ ಮುಂದೆ ವಿವರ ಹೇಳಲಿದ್ದೇವೆ ಎಂದರು.
ನಾನು ಸಿಎಂ ಅವರಿಗೆ ಭೇಟಿಯಾಗಿ ನೆಟೆರೋಗದ ಪರಿಹಾರ ಬಿಡುಗಡೆ ಮಾಡುವಂತೆ ವಿನಂತಿ ಮಾಡಿದ್ದೇನೆ. ಆರ್ಥಿಕ ಇಲಾಖೆ ಜತೆ ಚರ್ಚೆ ನಡೆಸಿ ಪರಿಹಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಂದು ವೇಳೆ ಬಿಡುಗಡೆ ಮಾಡದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದರು.
ಕಲಬುರಗಿ ಬಂದ್‌ಗೆ ನಮ್ಮ ಬೆಂಬಲವಿದೆ. ರೈತರ ಪರ ಹೋರಾಟ ಮಾಡುವ ಯಾರೇ ಆಗಲಿ ಅವರ ಪರ ನಾವಿರುತ್ತೇವೆ ಎಂದು ಘೋಷಿಸಿದರು.
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರಿಗೆ ಒಂದೇ ಒಂದು ಬಾರಿ ವಿಚಾರಣೆಗೆ ಕರೆಯದೆ ಕ್ಲೀನ್ ಚೀಟ್ ಕೊಟ್ಟಿದ್ದಾರೆ. ಈಗ ಅರವಿಂದ ಲಿಂಬಾವಳಿ ಕೇಸಲ್ಲಿ ಕೂಡಾ ಅದೇ ಆಗುತ್ತದೆ. ನಾವು ಈಗಾಗಲೇ ಅವರ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಏನು ಹೇಳಬೇಕೋ ಅದನ್ನೇ ಹೇಳಿದ್ದೇವೆ.
ಮಣಿಕಂಠ ರಾಠೋಡ್ ಮಾಡುತ್ತಿರುವ ಆಪಾದನೆಗಖ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ನನ್ನ ಮೇಲೆ ಆರೋಪ ಮಾಡುತ್ತಿದ್ದರೆ ಅದನ್ನು ಸಾಬೀತು ಮಾಡುವ ಜವಾಬ್ದಾರಿಯೂ ಕೂಡ ಅವರಿಗೆ ಸೇರಿದೆ. ನೀವು ಅವರ ಬಗ್ಗೆ ಜಾಸ್ತಿ ಪ್ರಚಾರ ಕೊಡುತ್ತಿರುವುದರಿಂದ ಅವರಿಗೆ ಪ್ರಚಾರ ಸಿಗುತ್ತಿದೆ ಅಷ್ಟೆ ಎಂದರು.