ಬೆಳಗಾವಿ: ಮಹಾರಾಷ್ಟ್ರ ಸೇರಿ ಗಡಿ ಭಾಗದ ಚಿಕ್ಕೋಡಿ, ಕಾಗವಾಡ, ರಾಯಭಾಗ, ಅಥಣಿ, ನಿಪ್ಪಾಣಿ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಪ್ರವಾಹದ ಭೀತಿ ತಲೆದೋರಿದ್ದು, ಸದ್ಯ ಒಟ್ಟು 17 ಸೇತುವೆಗಳು ಜಲಾವೃತವಾಗಿವೆ.
ನಿರಂತರ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದ್ದು ನಾಲ್ಕು ದಿನಗಳ ಅವಧಿಯಲ್ಲಿ 35ಕ್ಕೂ ಅಧಿಕ ಮನೆ ಕುಸಿದು ಬಿದ್ದಿದ್ದು ಇಬ್ಬರು ಬಲಿಯಾಗಿದ್ದಾರೆ. ಬೈಲಹೊಂಗಲ, ಸವದತ್ತಿ, ಚಿಕ್ಕೋಡಿ, ಬೆಳಗಾವಿಯಲ್ಲಿ 16 ಮನೆ, ನಿಪ್ಪಾಣಿ ತಾಲೂಕು ಒಂದರಲ್ಲಿಯೇ 19 ಮನೆಗಳು ಕುಸಿದಿವೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭೆ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳ ನೀರಿನ ಹರಿವು ಹೆಚ್ಚಳವಾಗುತ್ತಿದೆ. ಹಿಡಕಲ್ ಜಲಾಶಯದಿಂದ 20,000 ಸಾವಿರಕ್ಕೂ ಹೆಚ್ಚು ಕೂಸೆಕ್ ನೀರು ಹರಿಬಿಡಲಾಗುತ್ತಿದೆ.
ಗೋಕಾಕ-ಶಿಂಗಳಾಪುರ, ಹುಕ್ಕೇರಿ-ಯರನಾಳ, ಕುರಣಿ-ಕೋಚರಿ, ಕುನ್ನೂರ-ಬೋರವಾಡ, ಅಕ್ಕೋಳ-ಸಿದ್ನಾಳ ಸೇತುವೆ ಮುಳುಗಡೆಯಾಗಿವೆ. ಕುನ್ನೂರ-ಬೋಜವಾಡ, ಕುನ್ನೂರ-ಬೋರಬಾಡ, ಭಿವಶಿ-ಜತ್ರಾಟ ಸೇತುವೆ ಜಲಾವೃತಗೊಂಡಿವೆ. ಗೋಕಾಕ ತಾಲೂಕಿನ ಲೋಳಸೂರು ಸೇತುವೆ, ಹುಕ್ಕೇರಿ ತಾಲೂಕಿನ ಹುಕ್ಕೇರಿ-ಯರನಾಳ ಸೇತುವೆ ನದಿ ನೀರಿನಲ್ಲಿ ಮುಳುಗಿದೆ. ಘಟಪ್ರಭಾ ನದಿಯ ನೀರಿನ ಪ್ರಮಾಣ ಹೆಚ್ಚಳ ಆಗುತ್ತಿರುವುದರಿಂದ ಹಳೆ ದನಗಳ ಪೇಟೆ ಸೇರಿದಂತೆ ನದಿ ತೀರದಲ್ಲಿರುವ ಗಲ್ಲಿಗಳಲ್ಲಿ ನೀರು ನುಗ್ಗುವ ಭೀತಿ ಎದುರಾಗಿದೆ. ಮುಂಜಾಗ್ರತಾ ಕ್ರಮವಾಗಿ ಯಾವುದೇ ಅನಾಹುತ ಸಂಭವಿಸದಂತೆ ಪೊಲೀಸ್ ಅಧಿಕಾರಿಗಳು ಬ್ಯಾರಿಕೇಡ್‌ಗಳಿಂದ ಈ ರಸ್ತೆಗಳನ್ನು ಮುಚ್ಚಿದ್ದಾರೆ ಮತ್ತು ಪೊಲೀಸರನ್ನು ನಿಯೋಜಿಸಿದ್ದಾರೆ.
ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಹೆಚ್ಚಿದ್ದು ಇಬ್ಬರನ್ನು ಬಲಿ ಪಡೆದುಕೊಂಡಿದೆ. ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಮನೆಗೋಡೆ ಕುಸಿದು ಗಂಗವ್ವ ರಾಮಣ್ಣ ಮೂಲಿಮನಿ(55) ಮೃತಪಟ್ಟಿದ್ದರು. ಅಲ್ಲದೇ ಗೋಕಾಕ ತಾಲೂಕಿನ ಕೊಳವಿ ಗ್ರಾಮದ ದಂಡಪ್ಪ ಬಸಪ್ಪ ಮಾಲದಿನ್ನಿ(25) ಹಳ್ಳದ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾನೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಳೆಯ ಅಬ್ಬರ ಸೋಮವಾರವೂ ಮುಂದುವರೆದಿದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ ಐದು ದಿನಗಳ ಕಾಲ ಮಳೆಯಾಗುವುದಾಗಿ ಹವಾಮಾನ ಇಲಾಖೆಯಿಂದ ಸೂಚನೆ ಸಿಕ್ಕಿದೆ.