ಬೆಳಗಾವಿ: ಬರುವ ಡಿಸೆಂಬರ್ ೧೯ರೊಳಗಾಗಿ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಸಂಬಂಧ ಮುಖ್ಯಮಂತ್ರಿಗಳು ಶಾಶ್ವತ ಹಿಂದುಳಿದ ಆಯೋಗದಿಂದ ವರದಿ ಪಡೆದುಕೊಳ್ಳದಿದ್ದರೆ ದಿ. ೨೨ರಂದು ಸುವರ್ಣಸೌಧ ಮುಂದೆ ೨೫ ಲಕ್ಷ ಪಂಚಮಸಾಲಿಗರನ್ನು ಸೇರಿ ವಿರಾಟ ಪಂಚ ಶಕ್ತಿ ಸಮಾವೇಶ ನಡಸುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು,
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. 12ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟವನ್ನು ರದ್ದು ಮಾಡಿದ್ದೇವೆ. ಆದರೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನ ಪ್ರಾರಂಭವಾಗುವ ಮುನ್ನ ಸರ್ಕಾರ ವರದಿ ತರಿಸಿಕೊಳ್ಳದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಈಗ ಸಿಎಂ ಅವರಿಗೆ ಗಡುವು ನೀಡಿದ್ದೇವೆ., ಅಷ್ಟರೊಳಗಾಗಿ ಶಾಶ್ವತ ಹಿಂದುಳಿದ ಆಯೋಗದ ವರದಿ ಪಡೆದುಕೊಂಡರೆ ನಾವು ಯಾವುದೇ ಕಾರಣಕ್ಕೂ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟ ಮಾಡುವುದಿಲ್ಲ. ಬದಲಾಗಿ ಅದೇ ಹೋರಾಟವನ್ನು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಮಾಡುವ ಬಗ್ಗೆ ವಿಚಾರ ಮಾಡಿದ್ದೇವೆ ಎಂದರು.