ಹಾವೇರಿ : ವರದಾ ನದಿಯಲ್ಲಿ ತಾಡಪತ್ರೆಗಳನ್ನು ತೊಳೆಯಲು ಹೋದ ಯುವಕ ಈಜು ಬಾರದೆ ನದಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರ ಗ್ರಾಮದ ಬಳಿ ಇರುವ ವರದಾ ನದಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಟಿಪ್ಪುಸುಲ್ತಾನ ಮೇಡ್ಲೇರಿ (೨೩ ವರ್ಷ) ಎಂದು ಗುರುತಿಸಲಾಗಿದೆ. ಯುವಕ ಟಿಪ್ಪುಸುಲ್ತಾನ ತಾಡಪತ್ರೆಗಳನ್ನು ತೊಳೆಯಲು ವರದಾ ನದಿಯ ಕಳಸೂರ ಗ್ರಾಮದ ಬಳಿ ಇರುಬ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ತೆರಳಿದ್ದ. ನದಿಯ ನೀರಿನಲ್ಲಿ ತಾಡಪತ್ರೆ ತೊಳೆಯುತ್ತಿದ್ದ ವೇಳೆ ಪಕ್ಕದಲ್ಲಿದ್ದ ಬಕೇಟ್ ನದಿಯಲ್ಲಿ ತೇಲಿ ಹೋಗುತ್ತಿದ್ದನ್ನು ಕಂಡು, ಅದನ್ನು ಹಿಡಿಯಲು ಹೋಗಿ ಈಜು ಬಾರದೆ ನದಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ನದಿಯಲ್ಲಿ ಕಾರ್ಯಾಚರಣೆ ನಡೆಸಿ, ಮೃತ ಟಿಪ್ಪುಸುಲ್ತಾನನ ಮೃತದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.