ಚಿಕ್ಕಮಗಳೂರು: ಹೆಲ್ಮೆಟ್ ಹಾಕಿಲ್ಲ ಎಂದು ಚಿಕ್ಕಮಗಳೂರು ನಗರ ಪೊಲೀಸರು ವಕೀಲರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದ ಆರೋಪದಡಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಆರು ಜನ ನಗರ ಠಾಣಾ ಪೊಲೀಸರನ್ನ ಅಮಾನತು ಮಾಡಿದ್ದಾರೆ.
ಓರ್ವ ಪಿಎಸ್‍ಐ, ಓರ್ವ ಎ.ಎಸ್.ಐ. ಓರ್ವ ಹೆಡ್ ಕಾನ್ಸಟೇಬಲ್ ಸೇರಿದಂತೆ ಮೂವರು ಪೇದೆಗಳನ್ನ ಅಮಾನತು ಮಾಡಿದ್ದಾರೆ.
ಕಳೆದ ರಾತ್ರಿ 8 ಗಂಟೆ ವೇಳೆಗೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಗರ ಠಾಣೆ ಮುಂಭಾಗ ಯುವ ವಕೀಲ ಪ್ರೀತಂ ಹೆಲ್ಮೆಟ್ ಹಾಕದೆ ಬೈಕಿನಲ್ಲಿ ಹೋಗುತ್ತಿದ್ದರು. ವಕೀಲರನ್ನ ಪ್ರಶ್ನಿಸಿದ ಪೊಲೀಸರು ಹಾಗೂ ವಕೀಲನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬೈಕಿನ ಕೀ ಏಕೆ ತೆಗೆಯುತ್ತೀರಾ ಎಂದು ಪ್ರಶ್ನಿಸಿದ ವಕೀಲ ದಂಡ ಕಟ್ಟುತ್ತೇನೆ ಎಂದು ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಠಾಣೆ ಎದುರೇ ಘಟನೆ ನಡೆದಿದ್ದರಿಂದ ಪೊಲೀಸರು ಆತನನ್ನ ಠಾಣೆಗೆ ಕರೆದೊಯ್ದು ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆಂದು ವಕೀಲರ ಸಂಘ ಆರೋಪಿಸಿದೆ.