ಧಾರವಾಡ(ಕುಂದಗೋಳ): ಲಂಚ ಪಡೆಯುತ್ತಿದ್ದ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ಕುಂದರಗಿ ಅವರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಶನಿವಾರ ನಿವೃತ್ತ ಶಿಕ್ಷಕರೊಬ್ಬರ ಪಿಂಚಣಿಗೆ ಸಂಬಂಧಿಸಿದಂತೆ ೮ ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತರು ಬೀಸಿದ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ನಿವೃತ್ತ ಶಿಕ್ಷಕರೊಬ್ಬರು ಪಿಂಚಣಿ ಹಾಗೂ ಗಳಿಕೆಯ ರಜೆ, ಗುಂಪು ವಿಮೆಗೆ (ಗ್ರುಪ್ ಇನ್ಸೂರನ್ಸ್) ಸಂಬಂಧಪಟ್ಟಂತೆ ಕಾಗದ ಪತ್ರಗಳಿಗೆ ಸಹಿ ಹಾಕಲು ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ಕುಂದರಗಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರಂತೆ. ಎಲ್ಲ ಪತ್ರಗಳಿಗೆ ಸಹಿ ಮಾಡಲು ೧೦ ಸಾವಿರ ಲಂಚ ಕೊಡಬೇಕು. ಕೊಟ್ಟರೆ ಮಾತ್ರ ಸಹಿ ಮಾಡುವುದಾಗಿ ಹೇಳಿದ್ದರಂತೆ. ಅನೇಕ ಬಾರಿ ಮನವಿ ಮಾಡಿದರೂ ಸಹಿ ಮಾಡದೇ ಸತಾಯಿಸಿದ್ದರಂತೆ. ಲಂಚ ಕೊಟ್ಟು ಸಹಿ ಪಡೆಯಲು ನಿರಾಕರಿಸಿದ ಸಂಬಂಧಪಟ್ಟ ನಿವೃತ್ತ ಶಿಕ್ಷಕರು ಲೋಕಾಯುಕ್ತರಿಗೆ ನವೆಂಬರ್ ೩೦ರಂದು ದೂರು ದಾಖಲಿಸಿದ್ದರು.