ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆ ಆಗಿರುವುದು ಒಳ್ಳೆಯ ವಿಚಾರ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರ ಪ್ರಕರಣ ಲೋಕಾಯುಕ್ತದಿಂದ ಹೊಸದಾಗಿ ತನಿಖೆ ಆಗಿ, ಸತ್ಯಾಂಶವೂ ಹೊರ ಬರಬೇಕು. ಎಲ್ಲರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇಂತಹ ಸಂದರ್ಭ ಸನ್ನಿವೇಶಗಳೇ ಬರುವುದಿಲ್ಲ ಎಂದರು. ಒಂದು ವೇಳೆ ಬಿ.ಎಸ್. ಯಡಿಯೂರಪ್ಪ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಲೋಕಾಯುಕ್ತರ ಈ ಜವಾಬ್ದಾರಿ, ಮುಂದಿನ ಭವಿಷ್ಯದ ಬಗ್ಗೆ ತಿಳಿಸಿದೆ ಎಂದರು.
ಎಸಿಬಿಯಲ್ಲಿದ್ದ ಅಧಿಕಾರಿಗಳನ್ನು ಲೋಕಾಯುಕ್ತ ಸಂಸ್ಥೆಗೆ ನೇಮಕ ಮಾಡಿರುವುದು ಸೂಕ್ತ ಕ್ರಮ ಅಲ್ಲ. ಲೋಕಾಯುಕ್ತಕ್ಕೆ ರಾಜಕಾರಣಿಗಳಿಗೆ ಇಷ್ಟವಾದ ಅಧಿಕಾರಿಗಳನ್ನು ಕಳುಹಿಸಬಾರದು. ಈ ವಿಚಾರವಾಗಿ ನಾನೊಂದು ಸಲಹೆ ನೀಡಿದ್ದೆ. ಲೋಕಾಯುಕ್ತರು ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆದು, ಅವರನ್ನು ನೇಮಕ ಮಾಡಿಕೊಳ್ಳಬೇಕಿದೆ. ಲೋಕಾಯುಕ್ತರು ಸೂಕ್ತವಾದ ಅಧಿಕಾರಿಗಳನ್ನು ಆಯ್ಕೆ ಮಾಡುವಂತಹ ವ್ಯವಸ್ಥೆ ಬರಬೇಕು ಎಂದರು.
ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲು ಒಪ್ಪಿಗೆ
ಲೋಕಾಯುಕ್ತಕ್ಕೆ ಮತ್ತಷ್ಟು ಬಲ ಬರಬೇಕಾದರೆ ಸರ್ಕಾರಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲು ಮಾಡಲು ಸರ್ಕಾರ ಒಪ್ಪಿಗೆ ಕೊಡಬೇಕಿದೆ. ಖಾಸಗಿ ವ್ಯಕ್ತಿಗಳ ಮೇಲೆ ಲೋಕಾಯುಕ್ತ ಪ್ರಕರಣ ಸುಲಭವಾಗಿ ದಾಖಲಿಸಬಹುದು. ಆದರೆ, ಸರ್ಕಾರಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲು ಸರ್ಕಾರದ ಒಪ್ಪಿಗೆ ಬೇಕಾಗುತ್ತದೆ. ಹೀಗಾಗಿ, ಈಗಿರುವ ಪದ್ಧತಿಯನ್ನು ತೆಗೆದರೆ ಲೋಕಾಯುಕ್ತ ಸಂಸ್ಥೆ ಮತ್ತಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ ಆಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಹೇಳಿದರು.