ಬಾಗಲಕೋಟೆ :ಕಾಂಗ್ರೆಸ್ ಪಕ್ಷ ಲಿಂಗಾಯತರನ್ನು ಎಂದೂ ಗೌರವಯುತವಾಗಿ ಕಂಡಿಲ್ಲ, ಹಿರಿಯ ನಾಯಕ ಎಸ್.ಆರ್.ಪಾಟೀಲರನ್ನಂತೂ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಪಾದಿಸಿದ್ದಾರೆ.
ಮುಧೋಳದಲ್ಲಿ ಸಚಿವ ಗೋವಿಂದ ಕಾರಜೋಳ, ಬೀಳಗಿಯಲ್ಲಿ ಸಚಿವ ಮುರಗೇಶ ನಿರಾಣಿ ಅವರ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಆಗಮಿಸಿರುವ ಅವರು ಮುಧೋಳ ಹೆಲಿಪ್ಯಾಡ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಮುಧೋಳ ಹೆಲಿಪ್ಯಾಡನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ೧೯೬೭ ರಿಂದ ೫೦ ವರ್ಷದ ಆಡಳಿತ ಅವಧಿಯಲ್ಲಿ ಕಾಂಗ್ರೆಸ್ ಲಿಂಗಾಯತರಿಗೆ ಮುಖ್ಯಮಂತ್ರಿ ಮಾಡಿದ್ದು ಕೇವಲ ೯ ತಿಂಗಳು ಮಾತ್ರ ಎಂದರು.
ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಅನಾರೋಗ್ಯದ ಕಾರಣ ನೀಡಿ ಕೇವಲ ೯ ತಿಂಗಳಲ್ಲಿ ಅವಮಾನಕರ ರೀತಿಯಲ್ಲಿ ತೆಗೆದುಹಾಕಿತು, ರಾಜಶೇಖರಮೂರ್ತಿ, ಗುರುಪಾದಸ್ವಾಮಿ ಅವರಿಗೂ ಅವಮಾನ ಮಾಡಿದೆ ಈಗ ಎಸ್.ಆರ್.ಪಾಟೀಲರನ್ನು ವಂಚಿಸಿದೆ ಅವರಿಗೆ ಪ್ರತಿಪಕ್ಷದ ನಾಯತ ಸ್ಥಾನದಲ್ಲಿ ಮುಂದುವರೆಯಲು ಬಿಡಲಿಲ್ಲ ಟಿಕೆಟ್ ನೀಡಿಲ್ಲ ಇದು ಕಾಂಗ್ರೆಸ್ ಪಕ್ಷದ ಇತಿಹಾಸ ಎಂದು ಲೇವಡಿ ಮಾಡಿದರು.
ಲಿಂಗಾಯತರಿಗೆ ೨ ಎ ಮೀಸಲಾತಿ ನೀಡುವಾಗಲೂ ಕಾಂಗ್ರೆಸ್ ಸಕಾರಾತ್ಮಕವಾಗಿಲ್ಲ ನಮ್ಮ ಸರಕಾರ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದರೆ ಅದಕ್ಕೆ ಅಡ್ಡಿಮಾಡಲು ಪ್ರಚೋದಿಸಿ ನ್ಯಾಯಾಲಯಕ್ಕೆ ಹೋಗುವಂತೆ ಮಾಡಿದೆ ಎಂದೂ ಬೊಮ್ಮಾಯಿ ಆಪಾದಿಸಿದರು. ಉತ್ತರ ಕರ್ನಾಟಕದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಎಳ್ಳಷ್ಟು ಆಸಕ್ತಿ ಇಲ್ಲ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆ ನಿರ್ಲಕ್ಷಿಸಿದರು ಒಂದು ಎಕರೆಗೂ ನೀರಾವರಿ ಮಾಡಲಾಗಲಿಲ್ಲ ಎಂದು ಅವರು ದೂರಿದರು.
ಜನತೆ ವಿಶೇಷವಾಗಿ ಉತ್ತರಕರ್ನಾಟಕದ ಜನತೆ ಇದನ್ನೆಲ್ಲ ಗಮನಿಸಿದ್ದಾರೆ ಈ ಬಾರಿ ಕಳೆದ ಸಲಕ್ಕಿಂತಲೂ ಹೆಚ್ಚಿನ ಸ್ಥಾನ ಪಡೆಯುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಲು ರಾಜ್ಯ ನಾಯಕರು ಕಾರಣರಲ್ಲ ಕೇಂದ್ರದ ನೀತಿಯಂತೆ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡುವ ನಮ್ಮ ಯತ್ನಕ್ಕೆ ಅವರು ಸ್ಪಂದಿಸಲಿಲ್ಲ ಈಗ ಪಕ್ಷತೊರೆದಿದ್ದಾರೆ ಎಂದರು. ಪಕ್ಷ ಬಿಟ್ಟುಹೋದವರ ಕ್ಷೇತ್ರದಲ್ಲಿಯೇ ಬಿಜೆಪಿ ಗೆಲ್ಲಲು ಎಲ್ಲ ರಣತಂತ್ರ ರೂಪಿಸಲಾಗುತ್ತದೆ ಈ ಸಲದ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುವದು ನಿಶ್ಚಿತ ಎಂದೂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಸಚಿವರಾದ ಗೋವಿಂದ ಕಾರಜೋಳ ಮುರಗೇಶ ನಿರಾಣಿ ಉಪಸ್ಥಿತರಿದ್ದರು.