ದಾವಣಗೆರೆ: ಮೂರು ಸಲ ಶಾಸಕನಾಗಲು, ಸಚಿವನಾಗಲು ಬಿಜೆಪಿ ಅವಕಾಶ ನೀಡಿತ್ತು. ಸೋತರೂ ಉಪ ಮುಖ್ಯಮಂತ್ರಿ ಹುದ್ದೆ ನೀಡಿದರೂ ಪಕ್ಷ ತೊರೆದ ಲಕ್ಷ್ಮಣ ಸವದಿ ಒಬ್ಬ ವಿಶ್ವಾಸಘಾತುಕ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಪಕ್ಷ ಟಿಕೆಟ್ ಕೊಡದಿದ್ದ ಕಾರಣಕ್ಕೆ ಸಚಿವನಾಗಲು ಕಾಂಗ್ರೆಸ್‌ಗೆ ಹೋದ ಲಕ್ಷ್ಮಣ ಸವದಿ ನೀರಾವರಿ ಯೋಜನೆ ಬಗ್ಗೆ ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಹೀನಾಯವಾಗಿ ಸೋಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಅಥಣಿಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದಿಲ್ಲ, ಲಕ್ಷ್ಮಣ ಸವದಿ ಮತ್ತೆ ಶಾಸಕರೂ ಆಗಲ್ಲ. ಸೋತವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟು, ನಮ್ಮಂತಹ ನಿಷ್ಟಾವಂತ ಬಿಜೆಪಿ ಕಾರ್ಯಕರ್ತರಿಗೆ ಪಕ್ಷ ಬಾಯಿ ಮುಚ್ಚಿಸಿತ್ತು. ನಾಲ್ಕೈದು ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಿಸುವಷ್ಟು ಸವದಿ ಬಲಿಷ್ಟನಲ್ಲ. ಅಥಣಿ ಕ್ಷೇತ್ರದ ಜನರೇ ನಿಮ್ಮನ್ನು ತಿರಸ್ಕಾರ ಮಾಡಿದ್ದಾರೆ. ಬೆನ್ನಿಗೆ ಚಾಕು ಹಾಕಿದ ಸವದಿ ಪಕ್ಷದ್ರೋಹಿ ಎಂದು ಅವರು ಟೀಕಿಸಿದರು.