ಕುಂದಗೋಳ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ರೋಡ್ ಶೋಗೆ ಶಾ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಅಮಿತ್ ಶಾ ಅವರಿಗೆ ಲಂಬಾಣಿ ಮಹಿಳೆಯರು ಲಂಬಾಣಿ ಹಾಡುಗಳನ್ನು ಹಾಡುವ ಮೂಲಕ ಸ್ವಾಗತ ಕೋರಿದರು. ವಿಶೇಷವಾಗಿ ಅಲಂಕರಿಸಲಾಗಿದ್ದ ವಾಹನದಲ್ಲಿ ಅಮಿತ್ ಶಾ ಅವರು ರೋಡ್ ಶೋ ಆರಂಭಿಸುತ್ತಿದ್ದಂತೆ ಕಾರ್ಯಕರ್ತರು ಬೆಂಬಲಿಗರು ಪುಷ್ಪಾರ್ಚನೆ ಮಾಡಿದರು.
ಇದಕ್ಕೆ ಪ್ರತಿಯಾಗಿ ಅಮಿತ್ ಶಾ ಕಾರ್ಯಕರ್ತರು, ಸಾರ್ವಜನಿಕರಿಗೆ ಪುಷ್ಪಾರ್ಚನೆ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು. ರಸ್ತೆಯ ಎರಡೂ ಬದಿ ಕಿಕ್ಕಿರಿದು ನಿಂತಿದ್ದ ಬೆಂಬಲಿಗರು, ಕಾರ್ಯಕರ್ತರು, ಸಾರ್ವಜನಿಕರತ್ತ ಕೈ ಬೀಸುತ್ತಾ, ನಮಸ್ಕರಿಸುತ್ತಾ ಅಮಿತ್ ಶಾ ರೋಡ್ ನಡೆಸಿದರು. ರೋಡ್ ಶೋ ಸಾಗಿದ ಮಾರ್ಗದುದ್ದಕ್ಕೂ ಮೋದಿ, ಶಾ, ಪ್ರಹ್ಲಾದ ಜೋಶಿ, ಯಡಿಯೂರಪ್ಪ ಕೀ ಜೈ ಎಂದು ಕೂಗುತ್ತಿದ್ದ ಕಾರ್ಯಕರ್ತರು ಬಿಜೆಪಿ ಬಾವುಟ ಹಾರಿಸುತ್ತಾ ಮೆರವಣಿಗೆಯುದ್ದಕ್ಕೂ ಸಾಗಿದರು. ಪಟ್ಟಣದ ಪ್ರವಾಸಿ ಮಂದಿರದಿಂದ 3.45ಕ್ಕೆ ಆರಂಭಗೊಂಡ ರೋಡ್ ಶೋ ಸುಮಾರು ಒಂದು ಕಿ.ಮೀ. ಸಾಗಿ ಗಾಳಿ ಮರಿಯಮ್ಮ ದೇವಸ್ಥಾನದವರೆಗೆ ಸಾಗಿತು.
ಹರ ಹರ ಮೋದಿ, ಮೋದಿಗೆ ಜಯವಾಗಲಿ, ಜಯ ಜಯ ಮೋದಿ ಎಂದು ಜಯಕಾರ ಹಾಕುತ್ತ ರಸ್ತೆಯ ಇಕ್ಕೆಲಗಳಲ್ಲಿಯೂ ಬಿಜೆಪಿ ಕಾರ್ಯಕರ್ತರು, ಅಮಿತ್ ಶಾ ಅವರ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರು.