ರಾಷ್ಟ್ರೀಯ ಯುವಜನೋತ್ಸವ: ರೈಲ್ವೆ ಮೈದಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ, ಪರಿಶೀಲನೆ

Advertisement

ಹುಬ್ಬಳ್ಳಿ: ಜನವರಿ 12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ರೈಲ್ವೆ ಮೈದಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಈಗಾಗಲೇ ಪ್ರಧಾನಮಂತ್ರಿ ಅವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದರಂತೆ ಅಗತ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರಧಾನಿಯವರು ಕಾರ್ಯಕ್ರಮಕ್ಕೆ ಆಗಮಿಸುವ ಕುರಿತಂತೆ ಪ್ರಧಾನಿಯವರ ಕಚೇರಿಯಿಂದ ಯಾವುದೇ ಅಂತಿಮ ಸೂಚನೆಗಳು ಬಂದಿರುವುದಿಲ್ಲ. ಕಾರ್ಯಕ್ರಮದ ವೇಳೆಯು ಸಹ ಅಂತಿಮವಾಗಿರುವುದಿಲ್ಲ. ಒಟ್ಟಿನಲ್ಲಿ ಕಾರ್ಯಕ್ರಮದ ಭದ್ರತೆ, ಸುರಕ್ಷತಾ ಕ್ರಮಗಳು, ಸಾರಿಗೆ ಸೇರಿದಂತೆ ಇತರ ಅಗತ್ಯತೆಗಳ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಮನ್ ಗುಪ್ತಾ ಮಾತನಾಡಿ, ಜನವರಿ 12 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿಸುತ್ತಿದ್ದಾರೆ. ಅವರ ಸುರಕ್ಷತೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆಯನ್ನು ಕೈಗೊಳ್ಳಲಾಗುತ್ತಿದೆ ಎಂದರು.