ಕೊಪ್ಪಳ: ರಾಷ್ಟ್ರಾಭಿಮಾನ ಇಲ್ಲದ ಮನುಷ್ಯನ ಜೀವನ ಶೂನ್ಯವಾಗಿದ್ದು, ರಾಷ್ಟ್ರಾಭಿಮಾನ ಬೆಳೆಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮನೆಯ ಮೇಲೆ ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಭಾಗ್ಯನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿಯ ನಗರ ಮತ್ತು ಗ್ರಾಮೀಣ ಮಂಡಲದ ವತಿಯಿಂದ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಭಾಗ್ಯನಗರದ ಅಂಬಾಭವಾನಿ ದೇವಸ್ಥಾನದಿಂದ ನಗರದ ಬಸವೇಶ್ವರ ವೃತ್ತದ ವರೆಗೆ ತಿರಂಗಾ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
75ನೇ ಸ್ವಾತಂತ್ರ‍್ಯೋತ್ಸವ ಆಚರಣೆ ಹೆಮ್ಮೆ ಮತ್ತು ಖುಷಿ ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಾತಂತ್ರ‍್ಯ ಪಡೆಯುವ ಸನ್ನಿವೇಶದಲ್ಲಿ ದೇಶದ ಪರಿಸ್ಥಿತಿ, ಹೋರಾಟ, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರನ್ನು ಸ್ಮರಿಸುವುದಕ್ಕಾಗಿ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ಸರ್ಧಾರ್ ವಲ್ಲಭಭಾಯಿ ಪಟೇಲ್, ಲಾಲಾ ಲಜಪತ್ ರಾಯ ಸೇರಿದಂತೆ ಅನೇಕರು ಸ್ವಾತಂತ್ರ‍್ಯಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟರು. ಹಾಗಾಗಿ ಸ್ವಾತಂತ್ರ‍್ಯ ಹೋರಾಟಗಾರರಿಗೆ ಗೌರವ ಸಮರ್ಪಿಸಲು ರಾಷ್ಟ್ರಧ್ವಜವನ್ನು ಎಲ್ಲ ಮನೆಯ ಮೇಲೆ ಹಾರಿಸುವ ಆಂದೋಲನ ನಡೆಸುತ್ತಿದ್ದಾರೆ. ಇದರಿಂದ ಜಗತ್ತಿಗೆ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುತ್ತಿದ್ದಾರೆ. ನೀವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದ್ದು, ಭಾರತವನ್ನು ವಿಶ್ವಗುರುವಾಗಿಸಲು ಶ್ರಮಿಸುತ್ತಿದ್ದಾರೆ ಎಂದರು.