ರಾಜ್ಯ ರಾಜಕಾರಣಕ್ಕೆ ಬರುವುದು ಎಲ್ಲರ ಆಸೆ: ಸಂಸದ ಜಿ.ಎಂ. ಸಿದ್ದೇಶ್ವರ

ಜಿ.ಎಂ. ಸಿದ್ದೇಶ್ವರ
Advertisement

ದಾವಣಗೆರೆ: ರಾಜ್ಯ ರಾಜಕಾರಣಕ್ಕೆ ಬರಬೇಕೆಂಬುದು ಎಲ್ಲರ ಅಭಿಲಾಷೆಯಾಗಿರುತ್ತದೆ. ಈ ಬಗ್ಗೆ ನನ್ನ ನಿರ್ಧಾರವನ್ನು 2019ರ ಚುನಾವಣೆ ಸಂದರ್ಭದಲ್ಲೇ ಘೋಷಿಸಿದ್ದೇನೆ ಎಂದು ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಪುನರುಚ್ಛರಿಸಿದ್ದಾರೆ.
ತಾಲೂಕಿನ ಹುಳುಪಿನಕಟ್ಟೆ ಗ್ರಾಮದಲ್ಲಿ ಶನಿವಾರ ವಿಜ್ಞಾನ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಬರಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ, 2019ರ ಚುನಾವಣೆ ವೇಳೆಯೇ ನನ್ನ ಮುಂದಿನ ನಿರ್ಧಾರದ ಬಗ್ಗೆ ಹೇಳಿದ್ದೇನಲ್ಲ ಎಂದರು.
ತಮ್ಮ ಪುತ್ರ ಜಿ.ಎಸ್. ಅನಿತ್‌ನದ್ದು ಬೇರೆ ಪ್ರಶ್ನೆ. ನನ್ನ ವಿಚಾರವನ್ನು ಮಾತ್ರ ನಾನು ಹೇಳುತ್ತೇನೆ. ನನ್ನ ಮಾತು ಹೇಳಿದಂತೆಯೇ ನಾನು ನಡೆಯುವುದು ಶತಃಸಿದ್ಧ. ಆದರೆ, ವಿಧಾನಸಭೆ ಚುನಾವಣೆಗೆ ಸಿದ್ದೇಶ್ವರ ಸ್ಪರ್ಧಿಸುತ್ತಾರೆ, ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆ ಮಾಧ್ಯಮದವರಿಂದ ಕೇಳಿ ಬಂದಾಗ ಸಹಜವಾಗಿಯೇ ಒಳಗೊಳಗೆ ಖುಷಿ ಆಗುತ್ತದೆ ಎಂದ ಅವರು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೂ ನಾವೆಲ್ಲರೂ ಬದ್ಧರಿದ್ದೇವೆ. ನನ್ನ ನಿಲುವನ್ನೂ ಹಿಂದೆಯೇ ಪ್ರಕಟಿಸಿದ್ದೇನೆ. ಈ ವಿಚಾರದಲ್ಲಿ ಯಾವುದೇ ಗೊಂದಲವೂ ಇಲ್ಲ ಎಂದರು.