ರಾಜ್ಯ ಯುವನೀತಿಗೆ ಸ್ವಾಮಿ ವಿವೇಕಾನಂದರ ಸಂದೇಶವೇ ಪ್ರೇರಣೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

BASAVARAJ BOMAI
Advertisement

ಧಾರವಾಡ: ರಾಜ್ಯದ ಯುವನೀತಿಯಲ್ಲಿ ಶಿಕ್ಷಣ,ಕ್ರೀಡೆ,ಸಂಸ್ಕೃತಿ,ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಲಾಗಿದ್ದು, ಸ್ವಾಮಿ ವಿವೇಕಾನಂದರ ಸಂದೇಶದಿಂದ ಪ್ರೇರಿತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕೃಷಿ ವಿವಿಯಲ್ಲಿ ಆಯೋಜಿಸಿದ್ದ 26 ನೇ ರಾಷ್ಟ್ರೀಯ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು,
ಕರ್ನಾಟಕ ಸರ್ಕಾರ ಈ ವರ್ಷದಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘ ಯೋಜನೆಗಳನ್ನು ರೂಪಿಸಲಾಗಿದ್ದು, ಆರ್ಥಿಕ ಸಹಾಯ, ಯೋಜನೆ ಹಾಗು ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಮೂಲಕ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡಲಾಗುತ್ತಿದೆ. ಅಮೃತ ಕ್ರೀಡಾ ಯೋಜನೆಯಡಿ 75 ಕ್ರೀಡಾ ಪಟುಗಳನ್ನು ದತ್ತ ಪಡೆದು ತರಬೇತಿ, ಶಿಕ್ಷಣ ನೀಡಲಾಗುತ್ತಿದೆ. ಗ್ರಾಮೀಣ ಕ್ರೀಡಾಕೂಟದ ಮೂಲಕ ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಭಾರತೀಯರ ಹೃದಯ ಭಾರತ ಮಾತೆಗಾಗಿ ಮಿಡಿಯುತ್ತದೆ :
ಯುವಜನ ಉತ್ಸವ ಯಶಸ್ವಿಯಾದ ಸ್ಮರಣೀಯ ಕಾರ್ಯಕ್ರಮವಾಗಿದೆ. ವಿಭಿನ್ನ ಪ್ರಾಂತ್ಯದಿಂದ ,ರಾಜ್ಯಗಳಿಂದ ದೇಶದ ಮೂಲೆ ಮೂಲೆಗಳಿಂದ ಯುವಕರು ಬಂದಿದ್ದು, ಅಲ್ಲಿನ ಸಂಸ್ಕೃತಿ ಜೀವನ ವಿಭಿನ್ನವಾಗಿದ್ದರೂ ಭಾರತೀಯರ ಹೃದಯ ಒಗ್ಗಟ್ಟಿನಿಂದ ಭಾರತ ಮಾತೆಗಾಗಿ ಮಿಡಿಯುತ್ತದೆ. ರಾಷ್ಟ್ರೀಯತೆ ನಮ್ಮೆಲ್ಲರನ್ನೂ ಜೋಡಿಸುತ್ತದೆ. ಮಾನವ ಭಾವುಕ ಜೀವಿ. ಭಾವುಕತೆ ದೇಶವನ್ನು ಅಭಿವೃದ್ಧಿಗೊಳಿಸಲು ಇರಬೇಕು. ಬ್ರೀಟಿಷರಿಂದ ಭಾರತವನ್ನು ಸ್ವತಂತ್ರಗೊಳಿಸಲು ದೇಶಕ್ಕಾಗಿ ಪ್ರಾಣ ನೀಡಬೇಕಾಗಿತ್ತು. ಆದರೆ ಈಗ ದೇಶಕ್ಕಾಗಿ ಜೀವವನ್ನು ನಡೆಸಬೇಕು. ಎಲ್ಲರ ಪ್ರಗತಿಯಲ್ಲಿ ದೇಶದ ಪ್ರಗತಿಯಿದೆ. ದೇಶ ಮತ್ತು ನಾವು ಪ್ರತ್ಯೇಕವಲ್ಲ. ಸಮಯ ಯಾರಿಗೂ ಕಾಯುವುದಿಲ್ಲ. ಆದ್ದರಿಂದ ಜೀವನದಲ್ಲಿ ಸಕ್ಷಮವಾಗಿರಲು ಈ ವೇಗವನ್ನು ಕಾಯ್ದುಕೊಳ್ಳಬೇಕು. ಗುರಿಯೆಡೆಗೆ ನಮ್ಮ ಲಕ್ಷ್ಯವಿರಬೇಕು. ಯುವ ಜೀವನ ಸಂತೋಷ, ಪರಿಶ್ರಮದಿಂದ ಕೂಡಿರುತ್ತದೆ. ಯುವಜನರು ತಮ್ಮ ಶಕ್ತಿಯನ್ನು ಕನಸನ್ನು ಸಾಕಾರಗೊಳಿಸಲು, ಗುರಿಯನ್ನು ಸಾಧಿಸಲು ಬಳಸಬೇಕು ಎಂದರು.
ಯುವಕರು ತಮ್ಮ ಗುರಿಯನ್ನು ಕಠಿಣ ಪರಿಶ್ರಮದಿಂದ ಸಾಧಿಸಬೇಕು :
ಮೌಂಟ್ ಎವರೆಸ್ಟ್ ಮೊದಲು ಹತ್ತಿದವರು ಭಾರತದ ತೇನ್ ಸಿಂಗ್. ಕುರಿಗಾಹಿ ಕುಟುಂಬದವರಾಗಿದ್ದ ಅವರು ಪ್ರತಿದಿನ ಕುರಿ ಕಾಯಲು ಶಿಖರದ ಬುಡಕ್ಕೆ ಅವನ ತಾಯಿ ಕರೆದೊಯ್ಯುತ್ತಿದ್ದರು. ಆ ಶಿಖರವನ್ನು ಹತ್ತಲು ಪ್ರೇರಣೆಯನ್ನು ನೀಡಿದರು. ತನ್ನ 42 ವಯಸ್ಸಿನಲ್ಲಿ ತೇನ್ ಸಿಂಗ್ ಮೌಂಟ್ ಎವರೆಸ್ಟ್ ಹತ್ತಿ ಭಾರತದ ಕೀರ್ತಿಯನ್ನು ಹೆಚ್ಚಿಸಿದರು. ಶಿಖರವನ್ನು ಏರುವುದು ಬಹಳ ಕಷ್ಟವಾದರೂ ತನ್ನ ಗುರಿಯನ್ನು ಸಾಧಿಸಿದರು. ಇದು ಇಂದಿನ ಕನಸಲ್ಲ. ನಾನು ಹತ್ತು ವರ್ಷದ ಬಾಲಕನಾಗಿದ್ದಾಗಿನಿಂದಲೂ ನನ್ನ ಕನಸಾಗಿತ್ತು. ಯುವಕರು ತಮ್ಮ ಗುರಿಯನ್ನು ನಿಗದಿಪಡಿಸಿ, ಯಾವುದೇ ಕಷ್ಟ ಬಂದರೂ, ಕಠಿಣ ಪರಿಶ್ರಮದಿಂದ ಸಾಧಿಸುವುದಾದಲ್ಲಿ ಯಾವುದೂ ಅಸಾಧ್ಯವಲ್ಲ. ಯುವಜನರು ಏನನ್ನು ಬೇಕಾದರೂ ಸಾಧಿಸಬಹುದು, ಯಶಸ್ಸನ್ನು ಗಳಿಸಬಹುದು ಎಂದರು.
40 % ಯುವಶಕ್ತಿಯೇ ಭಾರತದ ಶಕ್ತಿ :
ಭಾರತದ ಯುವಜನರ ಬುದ್ಧಿಮತ್ತೆ ಇತರ ದೇಶಗಳ ಯುವಜನರಿಗಿಂತ ಹೆಚ್ಚಿದೆ. ಭಾರತದ ಯುವಜನರ ಬುದ್ಧಿಮತ್ತೆ ಮೊದಲಿನಿಂದಲೂ ಹೆಚ್ಚಿದ್ದು, ಅದೇ ನಿಮ್ಮಶಕ್ತಿ. ಭಾರತದ ಸಂಸ್ಕಾರ, ಸಂಸ್ಕೃತಿ ಮತ್ತು ಜನಸಂಖ್ಯೆಯೇ ನಮ್ಮ ಶಕ್ತಿ. ಸ್ವಾತಂತ್ರ್ಯದ ಸಂದರ್ಭದಲ್ಲಿ ಜನಸಂಖ್ಯೆ ನಮ್ಮ ಬಹಳ ದೊಡ್ಡ ಸಂಕಷ್ಟವಾಗಿತ್ತು. ಮೊದಲು ಜನಸಂಖ್ಯೆಯನ್ನು ದೇಶದ ಅಭಿವೃದ್ಧಿಗೆ ಮಾರಕ ವೆಂದು ತಿಳಿದಿದ್ದರು. 40 % ಯುವಶಕ್ತಿಯೇ ಭಾರತದ ಶಕ್ತಿಯಾಗಿದೆ ಎಂದರು.
ಆತ್ಮನಿರ್ಭರ , ಆತ್ಮವಿಶ್ವಾಸದ ಭಾರತದ ನಿರ್ಮಾಣ :
ಭಾರತದಂತಹ ಬೃಹತ್ ರಾಷ್ಟ್ರವು ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಕೋವಿಡ್ ವಿಷಮ ಪರಿಸ್ಥಿತಿಯಲ್ಲಿಯೂ ಎಲ್ಲರಿಗೂ ಆಹಾರ,ಉದ್ಯೋಗ,ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದೆ.ಶಿಕ್ಷಣದೊಂದಿಗೆ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗಿದೆ.ಮುದ್ರಾ ಯೋಜನೆ,ಸ್ವನಿಧಿ ಯೋಜನೆಗಳ ಮೂಲಕ ಸ್ವ ಉದ್ಯೋಗಕ್ಕೆ ದೊಡ್ಡ ಪ್ರೋತ್ಸಾಹ ದೊರೆತಿದೆ. ಆತ್ಮನಿರ್ಭರ , ಆತ್ಮವಿಶ್ವಾಸದ ಭಾರತದ ನಿರ್ಮಾಣ ಸಾಧ್ಯವಾಗುತ್ತಿದೆ. ಏಕ ಭಾರತ ಶ್ರೇಷ್ಟ ಭಾರತ ಎಂಬ ಚಿಂತನೆಯಿಂದ ಭವಿಷ್ಯ ಭಾರತದ ನಿರ್ಮಾಣದಲ್ಲಿ ಪ್ರಧಾನಿ ಮೋದಿಯವರು ತೊಡಗಿದ್ದಾರೆ ಎಂದರು.
ನಿಮ್ಮಭದ್ರ ಭವಿಷ್ಯದಿಂದ ದೇಶದ ಭವಿಷ್ಯವನ್ನು ಭದ್ರಗೊಳಿಸಬಹುದು:
ಕ್ರೀಡೆ ಆಡುವುದರಲ್ಲಿ ಸೋಲಬಾರದು ಎಂದು ಆಡುವುದು , ಗೆಲ್ಲಲೇಬೇಕೆಂಬ ಆಕ್ರಮಣಕಾರಿಯಾಗಿ ಆಡಬೇಕು. ಕ್ರೀಡಾಪಟು ಗೆಲ್ಲಲೇಬೇಕೆಂದು ಆಡಬೇಕು. ಇಡೀ ಜೀವನ, ಯಶಸ್ಸು ನಿಮ್ಮ ಕೈಯಲ್ಲಿದೆ. ನಿಮ್ಮ ಭವಿಷ್ಯವನ್ನು ನೀವೇ ಬರೆದುಕೊಳ್ಳಿ. ಇದರಿಂದ ಭಾರತದ ಭವಿಷ್ಯವನ್ನು ಬರೆದಂತಾಗುತ್ತದೆ ಎಂದು ಮುಖ್ಯಮಂತ್ರಿಗಳು ಯುವಕರಿಗೆ ಕಿವಿಮಾತು ಹೇಳಿದರು. ಯುವಜನೋತ್ಸವ ಯಶಸ್ಸಿಗೆ ಭಾರತ ಸರ್ಕಾರ, ಕೇಂದ್ರ ಸಚಿವರು, ಕ್ರೀಡಾ ಮಂತ್ರಿಗಳು, ಅಧಿಕಾರಿಗಳು, ಧಾರವಾಡ ಜಿಲ್ಲಾ ಆಡಳಿತ, ನೆಹರೂ ಯುವಕ ಕೇಂದ್ರ, ಧಾರವಾಡದ ಸಂಘಸಂಸ್ಥೆಗಳು, ಸಾರ್ವಜನಿಕರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.
ಸಮಾರಂಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ,ಗಣಿ,ಭೂವಿಜ್ಞಾನ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್,ಶಾಸಕರಾದ ಅರವಿಂದ ಬೆಲ್ಲದ,ಅಮೃತ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.