ಕಲಬುರಗಿ: ರಾಜ್ಯದ 20 ಕಡೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚುನಾವಣಾ ರ್ಯಾಲಿ ಹಾಗೂ ಪ್ರಚಾರ ಸಭೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಿಲ್ಲೆಯ ಅಫಜಲಪುರದಲ್ಲಿ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಎಲ್ಲಾ ವಿಭಾಗಗಳಲ್ಲಿ ಜತೆಗೆ ಪ್ರಮುಖ ಕ್ಷೇತ್ರಗಳಲ್ಲಿ ಮೋದಿ ಅವರು ಚುನಾವಣಾ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡುವರು. ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರಲ್ಲಿ ಮೋದಿ ಅವರ ಪ್ರಚಾರ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಇದೇ ಏ. 24ರಿಂದಲೇ ಮೋದಿ ಅವರ ಚುನಾವಣಾ ಪ್ರಚಾರ ಸಭೆ ಆರಂಭವಾಗಲಿದೆ ಎಂದರು.
ಆಂತರಿಕ ಭಯದ ಹಿನ್ನೆಲೆಯಲ್ಲಿ
ಕನಕಪುರದಲ್ಲಿ ಸಂಸದ ಡಿ.ಕೆ. ಸುರೇಶ ನಾಮಪತ್ರ ಹಾಕಿದ್ದಾರೆ. ಯಾವ ಭಯದ ಹಿನ್ನೆಲೆಯಲ್ಲಿ ನಾಮಪತ್ರ ಹಾಕಿದ್ದಾರೆ ಎಂಬುದು ಅವರಿಗೆಯೇ ಗೊತ್ತು. ನಾಮಪತ್ರ ಸ್ವೀಕರಿಸುವುದು- ತಿರಸ್ಕರಿಸುವುದು ಚುನಾವಣಾ ಆಯೋಗ. ಸಿದ್ದರಾಮಯ್ಯ ಅವರಿಗೆ ಕಾಡದ ಭಯ ಡಿ.ಕೆ. ಶಿವಕುಮಾರ ಅವರಿಗೇಕೆ? ಎಂದು ಸಿಎಂ ಬೊಮ್ಮಾಯಿ ಖಾರವಾಗಿ ಪ್ರಶ್ನಿಸಿದರು.
70 ಸ್ಥಾನಗಳನ್ನು ಲಿಂಗಾಯತರಿಗೆ ನೀಡಲಾಗಿದೆ. ಬಿಜೆಪಿ ಯಾವಾಗಲೂ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡುತ್ತಾ ಬಂದಿದೆ. ಕಳೆದ ಸಲ ಧರ್ಮ ಒಡೆದ ಕಾಂಗ್ರೆಸ್ ಲಿಂಗಾಯರನ್ನು ಛಿದ್ರ ಮಾಡಲು ಹುನ್ನಾರ ನಡೆಸಿದೆ ಎಂದು ಸಿಎಂ ವಾಗ್ದಾಳಿ ನಡೆಸಿದರು.