ರಬಕವಿ-ಬನಹಟ್ಟಿ(ಬಾಗಲಕೋಟೆ): ಅಕ್ರಮ ಆಸ್ತಿ ಗಳಿಕೆಯಲ್ಲಿ ತೇರದಾಳ ವಿಧಾನಸಭಾ ಶಾಸಕ ಸಿದ್ದು ಸವದಿಯವರು 150 ಎಕರೆಗಿಂತಲೂ ಮಿಗಿಲಾಗಿ ಗಳಿಸಿದ್ದಾರೆಂದು ಕಾಂಗ್ರೆಸ್ ಮುಖಂಡ ರಾಜು ದೇಸಾಯಿ ಆರೋಪಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಪ್ರಮುಖ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 5 ಎಕರೆ ಭೂಮಿ ಹಾಗೂ ಚಿಮ್ಮಡದಲ್ಲಿ ಕೃಷಿಯನ್ನು ಮೈನಿಂಗ್ ಆಗಿ ಪರಿವರ್ತಿಸುವುದರೊಂದಿಗೆ ಬೆಳಗಾವಿ ವಿಧಾನಸೌಧದೆದುರು ಸಹಿತ ಕುಟುಂಬಸ್ಥರಿಂದ ಹಾಗು ಬೆಂಬಲಿಗರ ಹೆಸರಿನಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆಂದು ದೇಸಾಯಿ ಪ್ರಬಲವಾಗಿ ಆರೋಪಿಸಿದ್ದಾರೆ.
ಕ್ಷೇತ್ರಾದ್ಯಂತ ಅಧಿಕಾರಿಗಳನ್ನು ಕೈಗೊಂಬೆಯಾಗಿಸಿಕೊಂಡು ತಮ್ಮ ಬೆಂಬಲಿಗರಿಗೇ ಟೆಂಡರ್ ನೀಡುವುದರೊಂದಿಗೆ ಕಳಪೆ ಕಾಮಗಾರಿ ಮೂಲಕ ಈ ರೀತಿ ಅಕ್ರಮ ಗಳಿಕೆಗೆ ಕಾರಣವಾಗಿದ್ದು, ಇವೆಲ್ಲದರ ಬಗ್ಗೆ ಬಹಿರಂಗ ವೇದಿಕೆಗೆ ಸಿದ್ಧನೆಂದು ಸವಾಲು ಹಾಕಿದರು. ಒಟ್ಟಾರೆ ಕ್ಷೇತ್ರಾದ್ಯಂತ ಹಿಟ್ಲರ್ಶಾಹಿ ಆಡಳಿತ ನಡೆಯುತ್ತಿದ್ದು, ಇವೆಲ್ಲದರ ವಿರುದ್ಧ ಮತ್ತಷ್ಟು ಅಕ್ರಮ ಆಸ್ತಿಗಳನ್ನು ಕಲೆ ಹಾಕುವ ಮೂಲಕ ಲೋಕಾಯುಕ್ತರಿಗೆ ದೂರು ನೀಡುವದಾಗಿ ಸ್ಪಷ್ಟಪಡಿಸಿದ್ದಾರೆ.
ಹೇಡಿಯ ಕೊನೆಯ ಅಸ್ತ್ರ ತೇಜೋವಧೆ-ಸಿದ್ದು ಸವದಿ
ನನ್ನ ಆದಾಯದ ಮೂಲ ಹಾಗೂ ಉದ್ಯೋಗದೊಂದಿಗೆ ಭೂಮಿ ಖರೀದಿಸಿದ್ದೇನೆ. ಇವೆಲ್ಲದಕ್ಕೂ ಪ್ರತಿವರ್ಷ ಲೋಕಾಯುಕ್ತ ಇಲಾಖೆಗೆ ಲೆಕ್ಕ ನೀಡುತ್ತಿದ್ದೇನೆ. ಅವಿಭಕ್ತ ಕುಟುಂಬದಿಂದ ಎಲ್ಲ ಸಹೋದರರು ಬೇರೆಯಾದ ನಂತರ 25 ಎಕರೆ ಭೂಮಿ ನನಗೆ ಬಂದಿದೆ. ಖಾಸಗಿ ವ್ಯವಹಾರದಲ್ಲಿನ ಲಾಭದೊಂದಿಗೆ ನನ್ನ ಅಭಿವೃದ್ಧಿ ಹೊಂದಿದ ಹಣ ಹಾಗೂ ಬ್ಯಾಂಕ್ಗಳಿಂದ ಪಡೆದ ಸಾಲದಿಂದ ಖರೀದಿಸಿದ್ದೇನೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಪ್ರತ್ಯುತ್ತರ ನೀಡಿದರು.
ಇದ್ಯಾವದನ್ನೂ ಸಹಿಸದೆ ನನ್ನ ವಿರುದ್ಧ ಆರೋಪಿಸಲು ಯಾವುದೇ ಅಸ್ತ್ರವಿಲ್ಲದ ಕಾರಣ ಹೇಡಿಯ ಕೊನೆಯ ಅಸ್ತ್ರ ತೇಜೋವಧೆಗೆ ಕಾರಣವಾಗಿ ಇಂತಹ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿಯೆಂದು ತೇರದಾಳ ಶಾಸಕ ಸಿದ್ದು ಸವದಿ ಸ್ಪಷ್ಟನೆ ನೀಡಿದರು.