ಬೆಳಗಾವಿ(ರಾಯಬಾಗ): ಪ್ರಥಮ ಬಾರಿಗೆ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು 1991ರಲ್ಲಿ ಪಾಸಾಗಿ ತಮಿಳುನಾಡಿನ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಶಂಭು ಕಲ್ಲೋಳಕರ ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿ ರಾಜಕೀಯ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಮೂಲತಃ ತಾಲೂಕಿನ ಯಬರಟ್ಟಿಯವರಾದ ಶಂಭು ಕಲ್ಲೋಳಕರ ಕಾಂಗ್ರೆಸ್ ಮುಖಂಡರ ಜೊತೆಗೆ ಹಲವಾರು ತಿಂಗಳಿಂದ ಸಂಪರ್ಕದಲ್ಲಿದ್ದು ಕರ್ತವ್ಯದಿಂದ ನಿವೃತ್ತಿಯಾಗುತ್ತಿದ್ದಂತೆ ಕಾಂಗ್ರೆಸ್ ಸೇರುವ ನಿರೀಕ್ಷೆ ಇದೆ. ಶಂಭು ಕಲ್ಲೋಳಕರ ಅವರು ರಾಜಕೀಯ ಪ್ರವೇಶಿಸಲು ತಮಿಳುನಾಡು ಸರಕಾರದಲ್ಲಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡುತ್ತಿರುವ ಮೂರನೇ ಅಧಿಕಾರಿಯಾಗಿದ್ದಾರೆ.
ಐಎಎಸ್ ಅಧಿಕಾರಿಯಾಗಿ ಪಶ್ಚಿಮ ಬಂಗಾಳದಲ್ಲಿ ಸೇವೆ ಆರಂಭಿಸಿದ ಇವರು ಕೇಂದ್ರ ಹಾಗೂ ರಾಜ್ಯ ಸರಕಾರದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈಗ ಮುಂಬರುವ ಚುನಾವಣೆಯಲ್ಲಿ ರಾಯಬಾಗ ಮತಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆ ಇದೆ. ಇವರು ರಾಜಕೀಯ ಮುಖಂಡರೊಂದಿಗೆ ಒಡನಾಟ ಹೊಂದಿದ್ದು, ಸದ್ದಿಲ್ಲದೇ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ.