ಮಂಗಳೂರು: ಮೊಟ್ಟೆ ಸಾಗಾಟದ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು ಮೊಟ್ಟೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಘಟನೆ ನಗರದ ವೆಲೆನ್ಸಿಯಾ ಸಮೀಪ ನಡೆಯಿತು. ಡಿಕ್ಕಿಯ ರಭಸಕ್ಕೆ ಮೊಟ್ಟೆ ಸಾಗಾಟದ ವಾಹನ ಸುಮಾರು 15 ಅಡಿಗಳಷ್ಟು ದೂರ ತಳ್ಳಲ್ಪಟ್ಟಿದೆ.
ಮಂಗಳಾದೇವಿಯಿಂದ ಬರುತ್ತಿದ್ದ ಎರಡು ಖಾಸಗಿ ಸಿಟಿ ಬಸ್‌ಗಳು ವೆಲೆನ್ಸಿಯಾದ ಸರ್ಕಲ್ ಬಳಿ ತಲುಪುತ್ತಿದ್ದಂತೆ ಓವರ್ ಟೇಕ್ ಮಾಡಲು ಮುಂದಾಗಿದ್ದು, ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ, ಅಂಗಡಿಗೆ ಮೊಟ್ಟೆ ಪೂರೈಕೆ ಮಾಡುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯಿತು. ಆ ವಾಹನದಲ್ಲಿದ್ದ ಮೊಟ್ಟೆಗಳೆಲ್ಲ ಒಡೆದು ರಸ್ತೆಯಲ್ಲಿ ಲೋಳೆ ನೀರಿನಂತೆ ಹರಿದಿದೆ.
ಮೊಟ್ಟೆ ಸಾಗಾಟದ ವಾಹನ ಎದುರಿಗಿದ್ದ ಗೂಡ್ಸ್ ಟೆಂಪೊ ಹಾಗೂ ಬೈಕ್‌ಗೂ ಗುದ್ದಿದೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆಗೆ ಕಾರಣವಾದ ಬಸ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.