ಬಾಗಲಕೋಟೆ(ರಬಕವಿ-ಬನಹಟ್ಟಿ): ಸಂಘಟನೆಗಳು ಸರ್ಕಾರಗಳ ಕಣ್ತೆರೆಯುವಲ್ಲಿ ಕಾರಣವಾಗುವವು. ರಾಜ್ಯ ಹಾಗೂ ಕೇಂದ್ರದವರೆಗೆ ಧ್ವನಿಯಾಗುವಲ್ಲಿ ಸಂಘಟನೆ ಶಕ್ತಿ ಮುಖ್ಯವೆಂದು ಜವಳಿ ಹಾಗೂ ಸಕ್ಕರೆ ಮಂತ್ರಿ ಶಂಕರ ಪಾಟೀಲ ಮುನೇನಕೊಪ್ಪ ಅಭಿಪ್ರಾಯಪಟ್ಟರು.
ಬನಹಟ್ಟಿಯಲ್ಲಿ ನಡೆದ ಹಟಗಾರ ಜಗದ್ಗುರುಗಳ ಪೀಠಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಅತಿ ಹೆಚ್ಚು ನೇಕಾರ ಸಮುದಾಯ ಹೊಂದಿದ್ದು, ಇಲ್ಲಿನ ನೇಕಾರರ ಅನುಕೂಲಕ್ಕಾಗಿ ಬರುವ ಬಜೆಟ್‌ನಲ್ಲಿ ಜವಳಿ ಪಾರ್ಕ್ ಘೋಷಣೆ ನಿಶ್ಚಿತವೆಂದು ವೇದಿಕೆ ಮೂಲಕ ತಿಳಿಸಿದರು.
ಅಲ್ಲದೆ 5 ಸಾವಿರ ಕುಟುಂಬಗಳಿಗೆ ಉದ್ಯೋಗವಕಾಶ ಸೇರಿದಂತೆ 25 ಸಾವಿರ ಜನರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಮಗ್ಗ ಮತ್ತು ಪಾವರ್‌ಲೂಮ್ ನೇಕಾರರಿಗೆ ಪ್ರಾಮಾಣಿಕವಾಗಿ `ನೇಕಾರ ಸಮ್ಮಾನ್ ಯೋಜನೆ’ ಯಡಿಯಲ್ಲಿ ತಲಾ 5 ಸಾವಿರ ರೂ.ಗಳ ಸಹಾಯಧನ ಒದಗಿಸುತ್ತಿದೆ. 2 ಲಕ್ಷ ರೂ.ಗಳವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೇರಿದಂತೆ ಬಹುದೊಡ್ಡ ಯೋಜನೆಗಳನ್ನು ನೀಡುವಲ್ಲಿ ಯಶಸ್ವಿ ಕಂಡಿದ್ದು, ಜವಳಿ ಕ್ಷೇತ್ರ ಉನ್ನತೀಕರಣಕ್ಕಾಗಿ ಸರ್ಕಾರ ಬದ್ಧವಿದೆ ಎಂದರು.