ರಂಗಾಯಣದಲ್ಲಿ ಭಾರತೀಯತೆ ಬಿಂಬಿಸುವ ಪ್ರಯೋಗಗಳಾಗಲಿ: ಸಿಎಂ ಬೊಮ್ಮಾಯಿ

Advertisement

ಮೈಸೂರು: ನಮ್ಮ ಸಂಸ್ಕೃತಿಯ ಜೊತೆಗೆ ಭಾರತೀಯತೆಯನ್ನು ಬಿಂಬಿಸುವಂತಹ ಪ್ರಯೋಗಗಳು ರಂಗಾಯಣದಲ್ಲಿ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಬಹುರೂಪಿ ರಂಗಾಯಣ, ಮೈಸೂರು ಇವರ ವತಿಯಿಂದ ರಂಗಾಯಣದ ವನರಂಗದಲ್ಲಿ ಆಯೋಜಿಸಿರುವ“ ಬಹುರೂಪಿ ರಾಷ್ಟ್ರೀಯ ರಂಗೋತ್ಸವ” ಉದ್ಘಾಟಿಸಿ ಅವರು ಮಾತನಾಡಿದರು.
ಬಹುರೂಪಿ ರಂಗೋತ್ಸವದಲ್ಲಿ ನಮ್ಮ ಸಂಸ್ಕೃತಿ ಪರಂಪರೆ, ಇತಿಹಾಸವುಳ್ಳ ಭಾರತೀಯತೆಯ ಆತ್ಮವನ್ನು ಬಿಂಬಿಸುವ ಪ್ರಯತ್ನ ಮಾಡಬೇಕು. ಇಂತಹ ಹೊಸ ಪ್ರಯತ್ನಗಳಿಂದ ರಂಗಾಯಣಕ್ಕೆ ಹೊಸ ಆಯಾಮ ದೊರೆಯಲಿದೆ. ರಂಗಾಯಣದ ಹೊಸ ವಿಚಾರಗಳು ಹಾಗೂ ವಿಭಿನ್ನ ಪ್ರಯತ್ನಗಳು ಜನರ ಬದುಕಿನಲ್ಲಿ ಬದಲಾವಣೆಗೆ ನಾಂದಿಯಾಗಲಿ. ರಂಗಾಯಣಕ್ಕೆ ಜಾಗ ಹಾಗೂ ಹೆಚ್ಚಿನ ಅನುದಾನದ ಬಗ್ಗೆಯೂ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ನಾಟಕಗಳು ಪರಿಣಾಮಕಾರಿ ಮಾಧ್ಯಮ
ಹೊಸ ಜನಾಂಗಕ್ಕೆ ಹೊಸ ವಿಚಾರಗಳನ್ನೊಳಗೊಂಡ ಹಾಗೂ ಎಲ್ಲರನ್ನೂ ಒಳಗೊಳ್ಳುವ ರಂಗಾಯಣ ಆಗಬೇಕು. ವೈಚಾರಿಕೆಯಲ್ಲಿ ಸತ್ಯ ಹಾಗೂ ಬದುಕಿಗೆ ಹತ್ತಿರವಾದ ವಿಚಾರಗಳನ್ನು ರಂಗಾಯಣ ಮುಂದಕ್ಕೆ ತರಬೇಕು. ಶಬ್ದಗಳಲ್ಲಿ ಹೇಳಲಾಗದ್ದನ್ನು ಹಾವ ಭಾವಗಳ ಮೂಲಕ ಜನರಿಗೆ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪಿಸುವ ಮಾಧ್ಯಮವೇ ನಾಟಕಗಳು ಎಂದರು.
ಅಭಿನಯ ನೈಜವಾಗಿರಬೇಕು
ನಟ ರಮೇಶ್ ಅರವಿಂದ ಅವರು ತಮ್ಮ ಪಾತ್ರಗಳನ್ನು ಸರಳವಾಗಿ ನಿರ್ವಹಿಸುತ್ತಾರೆ‌. ಅವರು ತಮ್ಮ ಮುಗ್ಧತೆಯನ್ನು ಇಂದಿಗೂ ಕಾಯ್ದುಕೊಂಡಿದ್ದಾರೆ. ನೈಜವಾಗಿ ಅಭಿನಯ ಮಾಡುವುದು ಬಹಳ ಕಷ್ಟ. ನಮ್ಮ ಬದುಕಿನಲ್ಲಿಯೇ ಕೆಲವು ನಿರ್ಬಂಧಗಳನ್ನು ಹಾಕಿಕೊಂಡಿರುತ್ತೇವೆ. ಚಿಕ್ಕವರಿದ್ದಾಗ ಇರುವ ಮುಗ್ದತೆ, ದೊಡ್ಡವರಾದ ಮೇಲೆ ಇರುವುದಿಲ್ಲ. ನಮ್ಮಲ್ಲಿ ಕೃತಕತೆ ಬಂದಾಗ ನೈಜತೆ ಮಾಯವಾಗುತ್ತದೆ. ಆತ್ಮಸಾಕ್ಷಿಯಿಂದ ಬದುಕುವುದು ಬಹಳ ಕಷ್ಟ. ಕೆಲವೇ ಸಾಧಕರಿಗೆ ಇದು ಸಾಧ್ಯವಾಗುತ್ತದೆ ಎಂದರು.
ನಾಟಕಗಳಲ್ಲಿ ಸ್ಪಷ್ಟತೆ ಇರಬೇಕು
ಮನಸ್ಸು ಶುದ್ಧ ಇದ್ದರೆ ಅದು ಮುಖದಲ್ಲಿ ಅಭಿವ್ಯಕ್ತವಾಗುತ್ತದೆ. ರಂಗಾಯಣದಲ್ಲಿ ಮಾನವೀಯತೆಯ ಮೇಲೆ ಪ್ರಯೋಗಗಳಾಗಬೇಕು. ಸಮಾಜದಲ್ಲಿರುವ ಲೋಪದೋಷಗಳನ್ನು, ಅಂಕುಡೊಂಕುಗಳನ್ನು ಸರಿಪಡಿಸುವ ಹಾಗೂ ವಾಸ್ತವಾಂಶದ ವಿಷಯ ವಸ್ತುಗಳಿರುವ ನಾಟಕಗಳು ಬರಬೇಕು. ನಾಟಕಗಳಲ್ಲಿ ನಿಷ್ಟುರತೆ ಹಾಗೂ ಸ್ಪಷ್ಟತೆ ಇರಬೇಕು. ನಮ್ಮಲ್ಲಿರುವುದು ನಮ್ಮ ನಾಗರಿಕತೆಯನ್ನು ಮತ್ತು ನಾವೇನಾಗಿದ್ದೇವೆ ಎಂಬುದು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಪರಂಪರಾಗತ ಮೈಸೂರು ಇಂದು ಆಧುನಿಕ ಮೈಸೂರಾಗಿ ಅಭಿವೃದ್ಧಿ ಹೊಂದಿದೆ . ಮೈಸೂರಿಗೆ ತನ್ನದೇ ಆದ ಸ್ಥಾನ ಇದೆಯೊ ಅದೇ ರೀತಿ ಮೈಸೂರು ರಂಗಾಯಣಕ್ಕೂ ವಿಶೇಷ ಸ್ಥಾನ ಇದೆ. ಇಂತಹ ಸಂಸ್ಥೆಗಳಲ್ಲಿ ವೈಚಾರಿಕ ಸಂಘರ್ಷಗಳು ನಡೆಯುತ್ತಿವೆ‌. ಎಲ್ಲಿ ವೈಚಾರಿಕ ಸಂಘರ್ಷ ಇರುವುದಿಲ್ಲವೊ ಅಲ್ಲಿ ಹೊಸ ವಿಚಾರಗಳು ಹಾಗೂ ಜೀವಂತಿಕೆ ಇರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಸಚಿವ ಎಸ್.ಟಿ. ಸೋಮಶೇಖರ್, ಚಲನಚಿತ್ರ ನಟ ರಮೇಶ್ ಅರವಿಂದ, ಸಂಸದ ಪ್ರತಾಪ ಸಿಂಹ ಮತ್ತಿತರು ಉಪಸ್ಥಿತರಿದ್ದರು.