ಹುಬ್ಬಳ್ಳಿ : ಯಾವ ಸಮುದಾಯಕ್ಕೂ ಅನ್ಯಾಯ ಆಗದ ರೀತಿ ಮೀಸಲಾತಿ ನಿಗದಿಯನ್ನು ಬಿಜೆಪಿ ಸರ್ಕಾರ ಮಾಡಿದೆ. ಹಿಂದೆ ಯಾವ ಸರ್ಕಾರಗಳೂ ಮಾಡಿರಲಿಲ್ಲ. ಇದಕ್ಕಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ, ಕೇಂದ್ರದ ನಾಯಕರಿಗೆ, ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ಇಲ್ಲಿನ ಆದರ್ಶನಗರದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದರು. ವೀರಶೈವ ಸಮಾಜಕ್ಕೆ ಶೇ 5 ರಿಂದ 7 ಕ್ಕೆ, ಒಕ್ಕಲಿಗ ಸಮಾಜಕ್ಕೆ ಶೇ 4 ರಿಂದ 6 ರಷ್ಟು ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಯಾರಿಗೂ ಅನ್ಯಾಯ ಆಗದಂತೆ ಎಚ್ಚರಿಕೆ ವಹಿಸಿ ಸರ್ಕಾರ ಮೀಸಲಾತಿ ನಿಗದಿಪಡಿಸಿದೆ. ಎಲ್ಲರೂ ಇದನ್ನು ಸ್ವಾಗತಿಸಿದ್ದಾರೆ ಎಂದು ಹೇಳಿದರು.
ಚುನಾವಣೆ ಹಿನ್ನೆಲೆಯಲ್ಲಿ ಮೀಸಲಾತಿ ಘೊಷಣೆ ಮಾಡಿದ್ದಲ್ಲ. ಆರು ತಿಂಗಳ ಹಿಂದಿನಿಂದಲೇ ಪ್ರಕ್ರಿಯೆ ನಡೆದಿತ್ತು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರು ಮಧ್ಯಂತರ ವರದಿ ಕೊಟ್ಟಿದ್ದರು. ಪರಾಮರ್ಶಿಸಿ ಸರ್ಕಾರ ಮೀಸಲಾತಿ ನಿಗದಿ ಮಾಡಿ ಘೊಷಣೆ ಮಾಡಿದೆ ಎಂದರು.
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಹೋರಾಟ ನಡೆಸಿದವರಲ್ಲಿ ಕೆಲವರು, ಸರ್ಕಾರದ ಮೀಸಲಾತಿ ನಿಗದಿ ಘೋಷಣೆಯನ್ನು ಒಪ್ಪಿಕೊಂಡಿಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ನಿರಾಣಿಯವರು, 2013 ರಿಂದ 2018 ರವರೆಗೆ ಅವರದೇ ಸರ್ಕಾರ ಇತ್ತು. ಈಗ ಯಾರು ಒಪ್ಪಿಲ್ಲ ಎನ್ನುತ್ತಿದ್ದಾರೆ ಅವರೇ ಶಾಸಕರಾಗಿದ್ದರು. ಆಗ ಯಾಕೆ ಅವರ ಸರ್ಕಾರದಿಂದ ಮಾಡಲು ಆಗಲಿಲ್ಲ ಎಂದು ಪ್ರಶ್ನಿಸಿದರು.