ಬೆಳಗಾವಿ: ಅಥಣಿ ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗಡಿನಾಡು ಶಕ್ತಿ ದೇವತೆ ಯಲ್ಲಮ್ಮವಾಡಿ ಯಲ್ಲಮ್ಮ ದೇವಿ ದೇವಸ್ಥಾನ ಜಲ ದಿಗ್ಬಂಧನಗೊಂಡಿದೆ.
ಅಥಣಿ ತಾಲೂಕಿನಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ಯಲ್ಲಮ್ಮವಾಡಿ ಕೆರೆ ತುಂಬಿ ದೇವಸ್ಥಾನ ಮುಂಭಾಗದ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ದೇವಸ್ಥಾನ ಸುತ್ತಲೂ ನೀರು ಆವರಿಸಿದೆ. ನವರಾತ್ರಿ ಹಬ್ಬದ ಪ್ರಯುಕ್ತ ದಿನನಿತ್ಯ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. ಸದ್ಯ ದೇವಸ್ಥಾನ ಜಲ ದಿಗ್ಬಂಧನಗೊಂಡ ಹಿನ್ನೆಲೆ ಭಕ್ತರು ಹಳ್ಳ ದಾಟಿಕೊಂಡು ದೇವರ ದರ್ಶನವನ್ನು ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಯಲ್ಲಮ್ಮವಾಡಿ ಯಲ್ಲಮ್ಮ ದೇವಿ ದೇವಸ್ಥಾನ ಎರಡನೆ ದೊಡ್ಡ ದೇವಾಲಯ ಎಂದು ಪ್ರಖ್ಯಾತಿ ಹೊಂದಿದೆ. ಸದ್ಯ ನವರಾತ್ರಿ ಆಚರಣೆಯಲ್ಲಿರುವ ಭಕ್ತರಿಗೆ ಮಳೆರಾಯನ ಅಬ್ಬರದಿಂದ ದೇವರ ದರ್ಶನಕ್ಕೆ ಅಡಚಣೆ ಉಂಟಾಗಿದೆ. ಎರಡು ತಿಂಗಳು ಪೂರ್ಣವಾಗುವ ಮೊದಲೇ ಎರಡನೇ ಬಾರಿಗೆ ದೇವಾಲಯ ಜಲ ದಿಗ್ಬಂಧನಕ್ಕೆ ಒಳಗಾಗಿದೆ. ಇದರಿಂದಾಗಿ ಹಳ್ಳದ ಪಕ್ಕದಲ್ಲಿ ಗ್ರಂಥಗಿ (ಸುಗಂಧ ದ್ರವ್ಯ) ವ್ಯಾಪಾರಸ್ಥರು ಪರದಾಡುವಂತಾಗಿದ್ದು, ತಮ್ಮ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವುದರಲ್ಲಿದ್ದು, ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗುತ್ತಿದೆ.