ಚಿಕ್ಕಮಗಳೂರು: ದತ್ತಪೀಠದ ಹೋರಾಟದಲ್ಲಿ ಈ ವರ್ಷ ಪುಳಕಿತ ವರ್ಷವಾಗಿದ್ದು, ಮೊದಲ ಬಾರಿಗೆ ಹಿಂದೂ ಅರ್ಚಕರ ಪೂಜೆ-ಮಂಗಳಾರತಿಯ ದರ್ಶನ ಸಿಕ್ಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ದತ್ತ ಜಯಂತಿ ಅಂಗವಾಗಿ ಬುಧವಾರ ಪತ್ನಿಯೊಂದಿಗೆ ಶ್ರೀ ಗುರುದತ್ತಾತ್ರೇಯ ಪೀಠಕ್ಕೆ ತೆರಳಿ ಪಾದುಕೆ ದರ್ಶನದ ನಂತರ ಮಾಲೆ ವಿಸರ್ಜಿಸಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಭಕ್ತರ ನಾಲ್ಕೈದು ದರ್ಶಕಗಳ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ, ಹಿಂದೂಗಳ ಮನದಲ್ಲಿ ಮತ್ತಷ್ಟು ಧಾರ್ಮಿಕ ಭಾವನೆಗಳು ಅರಳಿವೆ. ಬಿಜೆಪಿ ಸರ್ಕಾರ ಬಂದಾಗೆಲ್ಲಾ ಹಿಂದೂಗಳ ಬೇಡಿಕೆಗೆ ಸಹಮತ ನೀಡುತ್ತಿದ್ದೇವೆ. ಮುಜರಾಯಿ ದೇವಸ್ಥಾನದಂತೆ ಎಲ್ಲಾ ಹಿಂದೂ ಧಾರ್ಮಿಕ ಚಟುವಟಿಕೆ ನಡೆಯಬೇಕು. ಪ್ರವಾಸೋಧ್ಯಮ ಕ್ಷೇತ್ರದ ಜೊತೆ ಎಲ್ಲಿ ಏನೇನು ಆಗಬೇಕೋ ಅದೆಲ್ಲವನ್ನೂ ಮಾಡುತ್ತೇವೆ ಎಂದರು.
ಈ ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ಎಲ್ಲರೂ ಒಂದು, ಒಗ್ಗಟ್ಟಾಗಿರಬೇಕು. ಮುಖ್ಯಮಂತ್ರಿಗಳು ಸಾಂದರ್ಭಿಕವಾಗಿ ಎಚ್ಚರಿಕೆಯ ನಡೆಯನ್ನ ವ್ಯಕ್ತಪಡಿಸಿದ್ದಾರೆ. ಗಡಿಯಲ್ಲಿ ಕನ್ನಡದ ಭಾಷೆ, ಸಂಸ್ಕೃತಿಗೆ ತೊಂದರೆ ಆಗದಂತೆ ಸರ್ಕಾರ ಎಚ್ಚರಿಕೆ ವಹಿಸುತ್ತದೆ. ಸಮಾಜದ ಶಾಂತಿಗೆ ತೊಂದರೆ ಮಾಡುವ ಚಟುವಟಿಕೆಗಳನ್ನ ಸರ್ಕಾರ ಸಹಿಸುವುದಿಲ್ಲ, ಎಂಇಎಸ್ ಹಾಗೂ ಕಿಡಿಗೇಡಿಗಳ ಚಟುವಟಿಕೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.