ಮೊದಲ ಪಟ್ಟಿಯೇ ಗೆಲುವಿಗೆ ದಿಕ್ಸೂಚಿ: ಬೊಮ್ಮಾಯಿ

CM
Advertisement

ಬೆಂಗಳೂರು: ಪಕ್ಷದ ವತಿಯಿಂದ ಬಿಡುಗಡೆ ಮಾಡಿರುವ 189 ಅಭ್ಯರ್ಥಿಗಳ ಮೊದಲ ಪಟ್ಟಿಯೇ ಗೆಲುವಿನ ದಿಕ್ಸೂಚಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಎಚ್ ಎ ಎಲ್ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 189 ಅಭ್ಯರ್ಥಿಗಳಲ್ಲಿ ಹೊಸ ಮುಖ ತರುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮೊದಲ ಪಟ್ಟಿ ನೋಡಿದರೆ ಈ ಬಾರಿ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸುವ ದಿಕ್ಸೂಚಿ ಆಗಿದೆ ಎಂದರು.
ಟಿಕೆಟ್ ಕೈ ತಪ್ಪಿದವರು ಬಂಡಾಯ ಏಳುವ ಸಾಧ್ಯತೆ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಕೈ ತಪ್ಪುವ ಬಗ್ಗೆ ಆಗಾಗ್ಲೇ ಹೇಳಿದ್ದೇವೆ. ಒಟ್ಟು 3 ದಿನ ಚರ್ಚೆ ಮಾಡಿ ಈ ನಿರ್ಧಾರ ಮಾಡಿದ್ದೇವೆ ಎಂದರು‌.
ಇನ್ನೆರಡು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ.
ಇನ್ನೂ 34 ಕ್ಷೇತ್ರಗಳ ಪಟ್ಟಿ ಎರಡು ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ನಾವು ಮಾಡಿರುವ ಕೆಲಸಗಳನ್ನ ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳುತ್ತೇವೆ. ಬೂತ್ ಮಟ್ಟದಲ್ಲಿ ತೆರಳಿ, ಹಳ್ಳಿ ಹಳ್ಳಿಗೂ ಹೋಗಿ ಪ್ರಚಾರ ಮಾಡುತ್ತೇವೆ. ರಾಜ್ಯದ ಸಮರ್ಥ ಅಭಿವೃದ್ಧಿ, ಕೋವಿಡ್ ವೇಳೆ ಎದುರಿಸಿದ ಸವಾಲುಗಳು, ಹಲವಾರು ಯುವಕರಿಗೆ ಕೊಟ್ಟ ಕೆಲಸ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವಿನ ವಿಶ್ವಾಸ ಇದೆ ಎಂದು ಹೇಳಿದರು.
ಹಿರಿಯ ನಾಯಕರಿಗೆ ಟಿಕೆಟ್ ಕೈ ತಪ್ಪಿರುವ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯರು ಪಕ್ಷವನ್ನ ಕಟ್ಟಿದ್ದಾರೆ. ಪಕ್ಷ ಹಿರಿಯರನ್ನು ಬೆಳೆಸಿದೆ. ಅವರಿಗೆ ಪಕ್ಷದೊಂದಿಗೆ ಅನ್ಯೋನ್ಯ ಸಂಬಂಧ ಇರುವ ಕಾರಣ ಯಾವುದು ತೊಂದರೆ ಆಗುವುದಿಲ್ಲ. ಟಿಕೆಟ್ ತಪ್ಪುವವರಿಗೆ
ಯಾಕೆ? ಏನು ಕಾರಣ? ಮುಂದೆ ಯಾವ ರೀತಿಯ ಅವಕಾಶ ಇದೆ ಎಂಬುದನ್ನ ಹೇಳಿದ್ದೀವಿ. ನಮ್ಮದು ರಾಷ್ಟ್ರೀಯ ಪಕ್ಷ, ಶಿಸ್ತಿನ ಪಕ್ಷ ಬಿಜೆಪಿ. ಎಲ್ಲ ನಿಭಾಯಿಸುವ ಶಕ್ತಿ ಬಿಜೆಪಿಗೆ ಇದೆ ಎಂದರು.
ಇನ್ನು ಪಟ್ಟಿ ತಯಾರಿಸುವ ವೇಳೆ ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ ಎನ್ನುವುದು ಊಹಾಪೋಹ. ಎರಡು ದಿನ ಪೂರ್ಣ ಪ್ರಮಾಣದಲ್ಲಿ ಕೂತು ನಿರ್ಧಾರ ಮಾಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷರನ್ನ ಭೇಟಿ ಮಾಡಿ ಕೆಲವು ಸಲಹೆ ಪಡೆಯಲಾಗಿದೆ. ಸಂಪೂರ್ಣವಾಗಿ ಯಡಿಯೂರಪ್ಪ ಅವರು ಈ ಪಟ್ಟಿ ತಯಾರಿಸುವಲ್ಲಿ ಭಾಗಿಯಾಗಿದ್ದಾರೆ ಎಂದರು.