ಹುಬ್ಬಳ್ಳಿ : ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೇಟ್ ಜಿದ್ದಾಜಿದ್ದಿ ಕ್ಷೇತ್ರ ಎಂದೇ ಪರಿಗಣಿಸಿರುವ ಕಲಘಟಗಿ ಕ್ಷೇತ್ರಕ್ಕೂ ಮೊದಲ ಪಟ್ಟಿಯಲ್ಲಿ ಟಿಕೇಟ್ ಘೋಷಣೆ ಆಗಿಲ್ಲ.
ಈ ಕ್ಷೇತ್ರದಲ್ಲಿ ಕೈ ಟಿಕೇಟ್ ಆಕಾಂಕ್ಷಿಗಳಲ್ಲಿ ನಾಲ್ಕೈದು ಜನರಿದ್ದರೂ ಮಾಜಿ ಸಚಿವ ಸಂತೋಷ ಲಾಡ್ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರಲ್ಲಿ ಒಬ್ಬರಿಗೆ ಪಕ್ಷದ ವರಿಷ್ಠರು ಟಿಕೇಟ್ ಫೈನಲ್ ಮಾಡಲಿದ್ದಾರೆ. ಅದೂ ಮೊದಲ ಪಟ್ಟಿಯಲ್ಲಿಯೇ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು.ಆದರೆ, ಮೊದಲ ಪಟ್ಟಿಯಲ್ಲಿ ಯಾರಿಗೂ ಟಿಕೇಟ್ ಘೋಷಣೆ ಆಗಿಲ್ಲ. ಇಬ್ಬರು ಪ್ರಮುಖ ಆಕಾಂಕ್ಷಿಗಳಿರುವ, ಆಯ್ಕೆ ಕ್ಲಿಷ್ಟವಾಗಿರುವ ಪ್ರಮುಖ ಕ್ಷೇತ್ರಗಳ ಟಿಕೇಟ್ ಘೋಷಣೆ ಪೆಂಡಿಂಗ್ ಇಟ್ಟಿರುವುದೇ ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ನಾಗರಾಜ ಛಬ್ಬಿ ಮತ್ತು ಸಂತೋಷ ಲಾಡ್ ಟಿಕೇಟ್ ಗೆ ತೀವ್ರ ಪೈಪೋಟಿ ನಡೆಸಿರುವುದೇ ಪಕ್ಷದ ವರಿಷ್ಠರಿಗೆ ಮೊದಲ ಪಟ್ಟಿಗೆ ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಾಗರಾಜ ಛಬ್ಬಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆಂಬಲಿಗರಾಗಿದ್ದು, ಟಿಕೆಟ್ ಗೆ ಅಧ್ಯಕ್ಷರ ಮೇಲೆ ಒತ್ತಡ ಹೇರಿದ್ದಾರೆ. ಸಂತೋಷ ಲಾಡ್ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರಾಗಿದ್ದು, ಅವರ ಮೂಲಕ ಟಿಕೇಟ್ ಗಿಟ್ಟಿಸಲು ಲಾಡ್ ಪ್ರಯತ್ನ ನಡೆಸಿದ್ದಾರೆ.
ಅದೇ ರೀತಿ ನವಲಗುಂದ ಕ್ಷೇತ್ರಕ್ಕೆ ಕೈ ಟಿಕೇಟ್ ಗೆ ಮಾಜಿ ಸಚಿವ ಕೆ.ಎನ್ ಗಡ್ಡಿ, ಮಾಜಿ ಶಾಸಕ ಎನ್.ಎಚ್ ಕೋನರಡ್ಡಿ, ಯುವ ಮುಖಂಡ ವಿನೋದ ಅಸೂಟಿ ಸೇರಿದಂತೆ ಹನ್ನೊಂದು ಆಕಾಂಕ್ಷಿಗಳಿದ್ದು , ಈ ಕ್ಷೇತ್ರಕ್ಕೂ ಟಿಕೇಟ್ ಫೈನಲ್ ಆಗಿಲ್ಲ.
ಮಾಜಿ ಸಚಿವ ವಿನಯ್ ಕುಲಕರ್ಣಿ ಪ್ರತಿನಿಧಿಸಿಕೊಂಡು ಬಂದಿರುವ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೂ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಈ ಕ್ಷೇತ್ರಕ್ಕೆ ವಿನಯ್ ಕುಲಕರ್ಣಿ ಅವರನ್ನೇ ಮತ್ತೊಮ್ಮೆ ಕಣಕ್ಕಿಳಿಸಬೇಕಾ? ಅಥವಾ ಅವರಿಗೆ ಶಿಗ್ಗಾವಿ ಕ್ಷೇತ್ರಕ್ಕೆ ಟಿಕೇಟ್ ನೀಡಿ ಅವರ ಪತ್ನಿಯನ್ನು ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಕಣಕ್ಕಿಳಿಸಬೇಕಾ ಎಂಬ ಲೆಕ್ಕಾಚಾರ ಕಾಂಗ್ರೆಸ್ ವರಿಷ್ಠರದ್ದಾಗಿದೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಘೋಷಣೆ ಆಗಿಲ್ಲ ಎಂದು ವಿನಯ್ ಕುಲಕರ್ಣಿ ಅವರ ಆಪ್ತರು ಹೇಳುವ ಮಾತು.
ಇದೇ ಕ್ಷೇತ್ರಕ್ಕೆ ಪಕ್ಷದ ಮತ್ತೊಬ್ಬ ಮುಖಂಡ ಇಸ್ಮಾಯಿಲ್ ತಮಾಟಗಾರ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ.