ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ

ವಿಷ್ಣುವರ್ಧನ್
Advertisement

ಮೈಸೂರು: ಡಾ. ವಿಷ್ಣುವರ್ಧನ್ ಇಡೀ ಕರುನಾಡು ಮೆಚ್ಚಿದ ಹೃದಯವಂತ, ತಮ್ಮ ಅಭಿನಯದಿಂದಲೇ ಜನಮನ ಗೆದ್ದ ಅಪ್ರತಿಮ ನಟ ಎಂದು ಮುಖ್ಯಮಂತ್ರಿ ತಿಳಿಸಿದರು.
ನಗರದ ಎಚ್.ಡಿ. ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ಡಾ. ವಿಷ್ಣುವರ್ಧನ್ ಪ್ರತಿಷ್ಠಾನ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಿಸಿರುವ ಡಾ. ವಿಷ್ಣುವರ್ಧನ್ ಸ್ಮಾರಕ ಭವನ ಉದ್ಘಾಟಿಸಿ ಅವರು ಮಾತನಾಡಿದರು. ನಾಗರಹಾವು ಸಿನೆಮಾದ ರಾಮಾಚಾರಿ ಪಾತ್ರದ ಮೂಲಕ ಎಲ್ಲರ ಮನೆ ಮಾತಾದ ಡಾ. ವಿಷ್ಣುವರ್ಧನ್ ಯಾವುದೇ ಪಾತ್ರಕ್ಕೂ ಸೈ ಎನ್ನವಂತೆ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಡಾ. ವಿಷ್ಣುವರ್ಧನ್ ಅವರಿಗೆ ಜೀವನದಲ್ಲಿ ಜೊತೆಯಾಗಿ, ಶಕ್ತಿಯಾಗಿ ನಿಂತಿದ್ದ ಪದ್ಮಶ್ರೀ ಭಾರತಿ ಅವರು ವಿಷ್ಣುವರ್ಧನ್ ಅವರು ಜನಿಸಿದ ಮೈಸೂರಿನಲ್ಲೇ ಸ್ಮಾರಕ ನಿರ್ಮಾಣ ಮಾಡಬೇಕೆಂದು ಹಂಬಲಿಸಿ, ಪರಿಶ್ರಮವಹಿಸಿ ಸ್ಮಾರಕ ನಿರ್ಮಾಣ ಮಾಡಿಸಿದ್ದಾರೆ. ಈ ಭವ್ಯ ಸ್ಮಾರಕದಲ್ಲಿ ಎಲ್ಲಾ ಸೌಲಭ್ಯ ಇದೆ ಸಾರ್ವಜನಿಕರು ಹಾಗೂ ಚಿತ್ರರಂಗ ಇದರ ಅನುಕೂಲ ಪಡೆದುಕೊಳ್ಳಬೇಕು ಎಂದರು. ಸ್ಮಾರಕ ನಿರ್ಮಾಣಕ್ಕೆ ಯಡಿಯೂರಪ್ಪ ನವರು 11 ಕೋಟಿ ಬಿಡುಗಡೆ ಮಾಡಿಸಿದ್ದರು. ಇದಕ್ಕಾಗಿ ನಾನು ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಡಾ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಅಭಿಮಾನಿಗಳ ಒತ್ತಾಯವಾಗಿದೆ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಅವರ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಕೆಲಸ ಮಾಡಲಿದೆ ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಭಾರತಿ ವಿಷ್ಣುವರ್ಧನ್, ಅನಿರುದ್ಧ ಜತಕರ್, ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ, ಶಾಸಕರಾದ ರಾಮದಾಸ್, ನಾಗೇಂದ್ರ, ಜಿ.ಟಿ ದೇವೇಗೌಡ ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ವಿವಿಧ ಜನ ಪ್ರತಿನಿಧಿಗಳು ಹಾಜರಿದ್ದರು.