ಕಲಬುರಗಿ: ಕೇಂದ್ರ ಸರ್ಕಾರವು ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10 ಮೀಸಲಾತಿ ನೀಡಿದ್ದಾದರೂ ತ್ವರಿತಗತಿ ಕಾರ್ಯರೂಪಕ್ಕೆ ತರಬೇಕು. ಎಲ್ಲ ಜಾತಿ ಸಮುದಾಯದಲ್ಲಿ ಬಡವರು, ಆರ್ಥಿಕ ಬಲಹೀನರಿದ್ದಾರೆ. ಹೀಗಾಗಿ, ಮೇಲ್ವರ್ಗದವರಿಗೆ ಮೀಸಲಾತಿ ಕೊಟ್ಟಿರುವ ಬಗ್ಗೆ ವಿರೋಧ ಇಲ್ಲ, ಮೀಸಲಾತಿ ಕೊಡಬೇಡಿ ಎಂದೂ ಹೇಳಿಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಅಡ್ವಾಕೇಟ್ ಜನರಲ್ ಅಶೋಕ ಹಾರನಹಳ್ಳಿ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 45 ರಿಂದ 50 ಲಕ್ಷ ವಿಪ್ರ ಸಮುದಾಯದ ಜನಸಂಖ್ಯೆವಿದೆ. ಇಡಬ್ಲ್ಯೂಎಸ್ ಜಾತಿ ಪ್ರಮಾಣ ಪತ್ರವನ್ನು ಮೂರು ವರ್ಷದವರೆಗೆ ವಿಸ್ತರಿಸಬೇಕು. ಪ್ರಮಾಣ ಪತ್ರ ವಿತರಿಸುವುದಕ್ಕೆ ವಿಧಿಸಿರುವ ಮಾನದಂಡಗಳಲ್ಲಿ ಅಸ್ಪಷ್ಟವಾಗಿದ್ದು, ಗೊಂದಲ ಸರಿಪಡಿಸಬೇಕು. ದೋಷಪೂರಿತ ನಿರ್ಧಾರವಾಗಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದಾದರೂ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವ್ಯಾಪ್ತಿಗೆ ಈ ವಿಚಾರ ಬರುವುದಿಲ್ಲ. ಇನ್ನು ಸುಪ್ರಿಂಕೋರ್ಟ್ ಶೇ. 50ರಷ್ಟು ಮೀಸಲಾತಿ ಗಡಿದಾಟಬಾರದು ಎಂದು ಹೇಳಿದೆ. ಈ ನಿಟ್ಟಿನಲ್ಲಿ ಮೇಲ್ವರ್ಗದ ಕೇವಲ ಐದು ಜಾತಿಗಳಿಗೆ ಇಡಬ್ಲ್ಯೂಎಸ್ ಜಾತಿ ಪತ್ರದ ಜತೆ ಜತೆಗೆ ಎಲ್ಲ ಸಣ್ಣ, ಸೂಕ್ಷ್ಮ ಜಾತಿಗಳಿಗೂ ಸಿಗಬೇಕು ಎಂದರು.
ಅರ್ಹರಿಗೆ ಮೀಸಲಾತಿ ಸಿಗಲಿ
ರಾಜ್ಯದಲ್ಲಿ ಬಲಿಜ ಸಮಾಜ ಸೇರಿ ಅನೇಕ ಪ್ರಬಲ ಕೋಮಿನವರು ಹೋರಾಟ ಮಾಡಿದಾಕ್ಷಣ ಮೀಸಲಾತಿ ನೀಡುವುದಕ್ಕೆ ಬರುವುದಿಲ್ಲ. ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಮುಖ್ಯವಾಹಿನಿಯಿಂದ ಹಿಂದುಳಿದ ಸಮುದಾಯಗಳ ಅರ್ಹತೆ ಇದ್ದವರಿಗೆ ಮೀಸಲಾತಿ ಸಿಗಲಿ. 9ನೇ ಪರಿಚ್ಛೇದದ ಮೀಸಲಾತಿ ರಚನೆಗೆ ವಿರುದ್ಧವಾಗಬಾರದು. ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ಬಾರದು. ಪ್ರಬಲ ಕೋಮುಗಳು ಸಹ ಮೀಸಲಾತಿ ಕೇಳುವುದು ತಪ್ಪು ಎಂದು ಮಾಜಿ ಅಡ್ವಾಕೇಟ್ ಜನರಲ್ ಅಶೋಕ ಹಾರನಹಳ್ಳಿ ತಮ್ಮ ವೈಯಕ್ತಿಕ ನಿಲುವು ಸ್ಪಷ್ಟಪಡಿಸಿದರು.