ನವದೆಹಲಿ: ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಬಿಜೆಪಿ ಸಂಸದರು “ತೀಸ್ರಿ ಬಾರ್ ಮೋದಿ ಸರ್ಕಾರ್” (ಮೂರನೇ ಬಾರಿಗೆ ಮೋದಿ ಸರ್ಕಾರ) ಮತ್ತು “ಬಾರ್ ಬಾರ್ ಮೋದಿ ಸರ್ಕಾರ್” (ಮೇಲಿಂದ ಮೇಲೆ ಮೋದಿ ಸರ್ಕಾರ) ಘೋಷಣೆಗಳನ್ನು ಕೂಗಿದರು.
ಅಧಿವೇಶನಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿಧಾನಸಭಾ ಚುನಾವಣೆಯ ಫಲಿತಾಂಶಗಳು ತುಂಬಾ ಉತ್ತೇಜನಕಾರಿಯಾಗಿದೆ ಮತ್ತು ದೇಶದಲ್ಲಿ ರಾಜಕೀಯ ಬಿಸಿಯು ಕ್ಷಿಪ್ರ ದರದಲ್ಲಿ ಹೆಚ್ಚುತ್ತಿದೆ ಎಂದು ಹೇಳಿದರು. ಪ್ರತಿಪಕ್ಷಗಳಿಗೆ ರಚನಾತ್ಮಕವಾಗಿ ಏನಾದರೂ ಮಾಡಲು ಇದು ಸುವರ್ಣಾವಕಾಶ ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿನ ಬಗ್ಗೆ ಸದನದೊಳಗೆ ಕೋಪಗೊಳ್ಳಬೇಡಿ ಎಂದು ಕೇಳಿಕೊಂಡರು. ಪ್ರತಿಪಕ್ಷಗಳು ಸೋಲಿನಿಂದ ಪಾಠ ಕಲಿಯಬೇಕು ಎಂದರು. ಪ್ರತಿಪಕ್ಷಗಳು ದೇಶಕ್ಕೆ ಮೌಲ್ಯಯುತವಾಗಿವೆ, ಆದರೆ ಅದು ಶಕ್ತಿಯುತವಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಡಿಸೆಂಬರ್ 4 ರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 22 ರಂದು ಮುಕ್ತಾಯಗೊಳ್ಳಲಿದೆ.