ಚಿಕ್ಕಮಗಳೂರು: ಎಐಟಿ ವೃತ್ತದ ಸಮೀಪ ಸಾರಿಗೆ ಬಸ್ ಇಳಿಯುವಾಗ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವತಿ ರಕ್ಷಿತಾ ಬಾಯಿಯ ವಿವಿಧ ಅಂಗಾಂಗಗಳನ್ನು ತೆಗೆದು, ಅಗತ್ಯ ಇವರಿಗೆ ಜೋಡಣೆಗೆ ರವಾನಿಸುವ ಕೆಲಸ ನಗರದಲ್ಲಿ ನಡೆಯಿತು.
ರಕ್ಷಿತಾ ಅವರ ಅಂಗಾಂಗ ದಾನಕ್ಕೆ ಪೋಷಕರ ಸಮ್ಮತಿ ಪಡೆದು ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಪ್ರಕ್ರಿಯೆ ನಡೆಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಹಾಗೂ ಇಲ್ಲಿನ ತಜ್ಞರ ತಂಡವು ಬೆಳಿಗ್ಗೆ ೮ ರಿಂದ ಮಧ್ಯಾಹ್ನದ ೧ ಗಂಟೆವರೆಗೆ ಅಂಗಾಂಗಗಳನ್ನು ತೆಗೆಯುವ ಕೆಲಸ ನಡೆಸಿದರು.
ರಾಜ್ಯದ `ಜೀವನ ಸಾರ್ಥಕ’ ಸಂಸ್ಥೆಯಿಂದ ಮಾರ್ಗದರ್ಶನ ಹಾಗೂ ಜಿಲ್ಲಾಡಳಿತದ ನೆರವು ಪಡೆದು ಅಗತ್ಯವಿರುವ ವ್ಯಕ್ತಿಗಳಿಗೆ ಜೋಡಣೆಗೆ ಹೃದಯವನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಹೆಲಿಕಾಪ್ಟರ್‌ನಲ್ಲಿ ಬೆಳಿಗ್ಗೆ ೧೧ ಗಂಟೆಗೆ ಒಯ್ಯಲಾಯಿತು. ಯಕೃತ್ತನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಹಾಗೂ ಮೂತ್ರಕೋಶವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕಳಿಸಲಾಯಿತು.
ಆಂಬುಲೆನ್ಸ್ ಸಂಚಾರಕ್ಕೆ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಕಣ್ಣುಗಳನ್ನು ತೆಗೆಯಲಾಗಿದೆ. ಅಂಗಾಂಗ ತೆಗೆಯುವ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಈ ಪ್ರಕ್ರಿಯೆ ನಡೆಸಿದ ರಾಜ್ಯದ ಪ್ರಥಮ ಜಿಲ್ಲಾಸ್ಪತ್ರೆ ಇದು ಎಂದು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸಿ.ಮೋಹನ್‌ಕುಮಾರ್ ತಿಳಿಸಿದರು.
ಹೃದಯವನ್ನು ೯ ವರ್ಷದ ವ್ಯಕ್ತಿಗೆ ಜೋಡಿಸಲು ಒಯ್ದಿದ್ದಾರೆ. ಈಗ ತೆಗೆದಿರುವ ಹೃದಯ, ನೇತ್ರ, ಮೂತ್ರಕೋಶ, ಯಕೃತ್ತನ್ನು ಒಟ್ಟು ಒಂಬತ್ತು ಮಂದಿಗೆ ಜೋಡಿಸಲು ಅವಕಾಶ ಇದೆ ಎಂದರು.