ಕೊಪ್ಪಳ: ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಶೇ. 4ರಷ್ಟು ಮೀಸಲಾತಿ ರದ್ದುಪಡಿಸಿದ್ದನ್ನು ವಿರೋಧಿಸಿ ಮುಸ್ಲಿಂ ಸಮುದಾಯದವರು ನಗರದ ಅಶೋಕ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯದ ಮುಸ್ಲಿಂ ಸಮುದಾಯದವರು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಹೀಗಾಗಿ 2ಬಿ ಅಡಿ ಮೀಸಲಾತಿ ನೀಡಲಾಗಿತ್ತು. ಈಗ ಸರ್ಕಾರ ಮುಸ್ಲಿಂರ ಮೀಸಲಾತಿ ರದ್ದು ಪಡಿಸಿದ್ದು, ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಿರುವುದು ಖಂಡನೀಯ. ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ ಮತ್ತು 1990ರ ಚಿನ್ನಪ್ಪ ರೆಡ್ಡಿ ಆಯೋಗ ಕೂಡ ಮುಸ್ಲಿಂರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಲಾಗಿದೆ. ಇವರನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆಯಲಾಗದು. ಇದನ್ನು ಕರ್ನಾಟಕ ಹೈಕೋರ್ಟ್ ಈ ಹಿಂದಿನ (1979ರ 9 ಸೋಮಶೇಖರಪ್ಪ, ಇತರರು ಹಾಗೂ ಕರ್ನಾಟಕ ಸರಕಾರ ಪ್ರಕರಣ)ಪ್ರಕರಣದಲ್ಲಿ ಹೇಳಿದೆ ಎಂದು ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಯುಸೂಫಿಯಾ ಮಸ್ಜೀದ್ ಯಿಂದ ಆರಂಭವಾದ ಬೃಹತ್ ಮೆರವಣಿಗೆಯು ಜವಾಹರ ರಸ್ತೆಯ ಮೂಲಕ ಅಶೋಕ ವೃತ್ತ ತಲುಪಿತು. ಸರ್ಕಾರ ಮುಸ್ಲಿಂರ 2ಬಿ ಮೀಸಲಾತಿ ರದ್ದುಪಡಿಸಿದ್ದು, ಇದನ್ನು ಮರುಸ್ಥಾಪಿಸಬೇಕು ಎಂದು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮುಸ್ಲಿಂ ಸಮುದಾಯದವರು ಮನವಿ ಸಲ್ಲಿಸಿದರು. ಮುಖಂಡರಾದ ಸಲೀಂ ಮಂಡಲಗೇರಿ, ಸಲಿಂ ಖಾದ್ರಿ, ಸಲೀಂ ಗೊಂಡಬಾಳ, ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ಯಮನೂರಪ್ಪ ನಾಯಕ, ಎಂ.ಡಿ.ಆಸೀಫ್, ಆರ್.ಎಂ.ರಫಿ, ಶ್ಯಾಹಿದ್ ತಹಶಿಲ್ದಾರ, ಯಜ್ದಾನಿ ಪಾಷಾ, ಅಪ್ಸರಸಾಬ್ ಅತ್ತಾರ್, ಬಾಷುಸಾಬ ಖತೀಬ್, ಕಾಟನ್ ಪಾಷಾ, ಆದಿಲ್ ಪಟೇಲ್, ಅಯೂಬ್ ಅಡ್ಡೆವಾಲೆ, ಎಂ.ಕೆ.ಸಾಹೇಬ್, ಇಮ್ರಾನ್ ಅರಗಂಜಿ, ರೋಷನ್ ಅಲಿ ಮಂಗಳೂರು, ಮೆಹಮೂದ್ ಹುಸೇನಿ(ಚೋಟು), ಖಾಜಾವಲಿ ಬನ್ನಿಕೊಪ್ಪ, ಮಾನವಿ ಪಾಷಾ, ಎಸ್.ಎ.ಗಫಾರ್, ಅಜೀಂ ಅತ್ತಾರ್ ಸೇರಿದಂತೆ ಅನೇಕರು ಇದ್ದರು.