ಮುರುಘಾಶ್ರೀ ಪ್ರಕರಣ: ಸಾಕ್ಷ್ಯ ನಾಶಕ್ಕೆ ಸರ್ಕಾರದ ಸಹಕಾರ

ಎಚ್. ವಿಶ್ವನಾಥ್
Advertisement

ಮೈಸೂರು: ಮಠದ ವಸತಿ ನಿಲಯದ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಬಂಧಿತರಾಗಿರುವ ಮುರುಘಾ ಶ್ರೀಗಳ ಪ್ರಕರಣದಲ್ಲಿ ಸಾಕ್ಷ್ಯ ನಾಶಕ್ಕೆ ಸರ್ಕಾರವೇ ಅವಕಾಶ ಮಾಡಿಕೊಟ್ಟಂತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆರೋಪಿಸಿದರು.
ಮಕ್ಕಳ ಹಾಸ್ಟೆಲ್ ಬೆಡ್‌ಶೀಟ್‌ಗಳೆಲ್ಲವೂ ಬದಲಾಗಿದೆ. ಈ ರೀತಿ ಸಾಕ್ಷ್ಯ ನಾಶಕ್ಕೆ ಸರ್ಕಾರವೇ ಅವಕಾಶ ಕೊಟ್ಟಂತಿದೆ. ಶ್ರೀಗಳ ಪ್ರಕರಣದಲ್ಲಿ ಪೊಲೀಸರಿಂದ ಕರ್ತವ್ಯಲೋಪ ಆಗಿದೆ. ಹೀಗಾಗಿ ಚಿತ್ರದುರ್ಗ ಎಸ್‌ಪಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಬಳಿಕ, ಪ್ರಕರಣ ಬಯಲಾದುದಕ್ಕೆ ಸಂಬಂಧಿಸಿದಂತೆ ಒಡನಾಡಿಯ ಪರಶು ಸ್ಟ್ಯಾನ್ಲಿ ಅವರ ಕಾರ್ಯ ಶ್ಲಾಘನೀಯ. ಆದರೆ ಇವರಿಗೆ ಬೆದರಿಕೆ ಶುರುವಾಗಿದೆ. ಯಾವುದೇ ಆಮಿಷ, ಧಮ್ಕಿಗೆ ಹೆದರದೇ ಅವರು ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೆ, ಸಚಿವರೇನು ನ್ಯಾಯಾಧೀಶರೇ, ಇವರು ಸ್ವಾಮೀಜಿ ಪರ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಈ ಸ್ವಾಮೀಜಿ ಮಠದ ಕುಲಕ್ಕೇ ಅವಮಾನ, ಸಂಸಾರಿಗಳೇ ಮಠಾಧೀಶರಾಗಲಿ. ನಮ್ಮಲ್ಲಿ ಸಾಕಷ್ಟು ಪೀಠಾಧಿಪತಿಗಳಿದ್ದಾರೆ, ಆದರೆ ಬ್ರಹ್ಮಚಾರಿಗಳಿಲ್ಲ. ಮಕ್ಕಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಜೊತೆಗೆ, ಸರ್ಕಾರ ಮಠಕ್ಕೆ ಹಣ ಕೊಟ್ಟಿದ್ದು ಇದಕ್ಕೇನಾ ಎಂದು ಮತ್ತೆ ಪ್ರಶ್ನಿಸಿ, ಅಪ್ರಾಪ್ತ ಮಕ್ಕಳು ಸುಳ್ಳು ಹೇಳುವುದಿಲ್ಲ. ಮಕ್ಕಳು ಅಮಾಯಕರು. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.