ಮುಂದಿನ ದಿನಗಳಲ್ಲೂ ಲಿಂಗಾಯತ ಮುಖ್ಯಮಂತ್ರಿ

Advertisement

ಮಂಗಳೂರು: ಲಿಂಗಾಯತರಿಗೆ ಅತಿ ಹೆಚ್ಚು ಆದ್ಯತೆ ನೀಡಿದ್ದು ಬಿಜೆಪಿ. ಮೂವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ. ಮುಂದಿನ ದಿನಗಳಲ್ಲೂ ಲಿಂಗಾಯತ ಮುಖ್ಯಮಂತ್ರಿ ಮಾಡುವ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಶಾಸಕ ವೇದವ್ಯಾಸ ಕಾಮತ್ ನಾಮಪತ್ರ ಸಲ್ಲಿಸುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಹಿರಿಯ ನಾಯಕರು. ಅವರನ್ನು ಪಕ್ಷ ಇಷ್ಟು ಎತ್ತರಕ್ಕೆ ಬೆಳೆಸಿದೆ. ಅವರಿಗೆ ಎಲ್ಲ ಹುದ್ದೆಗಳನ್ನು ನೀಡಿದೆ. ಅವರು ರಾಜ್ಯ ಮಟ್ಟದ ನಾಯಕರಾಗಿ ಬೆಳೆಯುವಲ್ಲಿ ಬಿಜೆಪಿ ಕೊಡುಗೆ ದೊಡ್ಡದಿದೆ. ಶಾಸಕರಾಗಿ, ಸಚಿವರಾಗಿ ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಣೆ ಮಾಡಿದವರು. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕೇಂದ್ರದ ನಾಯಕರೇ ಅವರ ಮನೆಯಲ್ಲಿ ಬಂದು ಕುಳಿತು ಮಾತುಕತೆ ಮಾಡಿ, ಅವರ ಎಲ್ಲ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದರು. ಆದರೂ ಅವರು ಪಕ್ಷವನ್ನು ತೊರೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಏನು ಅಂತ ಅವರಿಗೂ ಅನುಭವವಾಗುತ್ತದೆ’ ಎಂದರು.
’ಮಂಗಳೂರು ದಕ್ಷಿಣ ಕ್ಷೇತ್ರದಿಂದ ವೇದವ್ಯಾಸ ಕಾಮತ್ ನಾಮಪತ್ರ ಸಲ್ಲಿಸಿದ್ದು, ಅಧಿಕ ಮತಗಳಿಂದ ಆಯ್ಕೆಯಾಗಲಿದ್ದಾರೆ ಎಂದ ಅವರು, ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಮಾಡುತ್ತೇವೆ’ ಎಂದು ಹೇಳಿದರು.
ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಹಿಂದುತ್ವವಾದಿ ಅರುಣ್ ಕುಮಾರ್ ಪುತ್ತಿಲ ಅವರು ಸಾವಿರಾರು ಜನರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ದು, ಈ ಬೆಳವಣಿಗೆ ಬಿಜೆಪಿಗೆ ಹಿನ್ನಡೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ’ಹಿರಿಯರು ಮಾತುಕತೆ ಮಾಡುತ್ತಾರೆ’ ಎಂದಷ್ಟೇ ಉತ್ತರಿಸಿದರು.