ಬೆಂಗಳೂರು: ನಮ್ಮ ಕೆಲಸ, ಆಡಳಿತದ ಆಧಾರದ ಮೇಲೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ವೈಯ್ಯಾಲಿಕಾವಲ್ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಪವಿತ್ರವಾದ ದಿನ. ಇಂದು ವೆಂಕಟೇಶ್ವರನ ದರ್ಶನ ಮಾಡಬೇಕೆಂದು ಪ್ರತೀತಿ. ತಿರುಪತಿಗೆ ಹೋಗಲು ಸಾಧ್ಯವಿಲ್ಲದಿರುವರರಿಂದ ಟಿಟಿಡಿಯವರ ದೇವಸ್ಥಾನಕ್ಕೆ ಬಂದು ಪುನೀತ ಭಾವನೆ ಮೂಡಿದೆ. ಕರ್ನಾಟಕದ ಜನತೆ ಅಭಿವೃದ್ಧಿ, ಸಮೃದ್ಧಿಯಾಗುವಂತೆ ದೇವರಲ್ಲಿ ಬೇಡಿಕೊಂಡಿದ್ದು, ಖಂಡಿತವಾಗಿ 2023ರಲ್ಲಿ ವೆಂಕಟೇಶ್ವರನ ಆಶೀರ್ವಾದ ಇರುತ್ತದೆ. ವೆಂಕಟೇಶ್ವರ ಎಂದರೆ ಅಭಿವೃದ್ಧಿ, ಸಮೃದ್ಧಿಯ ಸಂಕೇತ. ಕರ್ನಾಟಕ ಹಿಂದೆಂದೂ ಕಾಣದ ಅಭಿವೃದ್ಧಿ ಕಾಣಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.