ಮೀಸಲಾತಿ ವಿಳಂಬ ಖಂಡಿಸಿ ರಾಜಭವನ ಚಲೋ : ಸಿದ್ದು, ಡಿಕೆಶಿ ಪೊಲೀಸ್ ವಶಕ್ಕೆ

ಕೈ
Advertisement

ಬೆಂಗಳೂರು: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿ ಆದೇಶ ಮಾಡಿದರೂ ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ‌ ಶಿಫಾರಸ್ಸು ಮಾಡಿಲ್ಲ ಎಂದು‌ ಆರೋಪಿಸಿ ಕಾಂಗ್ರೆಸ್ ಇಂದು ರಾಜಭವನ ಚಲೋ ಹಮ್ಮಿಕೊಂಡಿತ್ತು. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ, ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸದ್ಯ ಕಾಂಗ್ರೆಸ್‌ ನಾಯಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಬಸ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ.
ವಶಕ್ಕೆ ಪಡೆಯುವುದಕ್ಕೆ ಮುನ್ನ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೋಸ ಮಾಡಿದೆ. ಇಲ್ಲಿಯವರೆಗೆ ಸುಮ್ಮನಿದ್ದ ಅವರು ನಾವು ಪ್ರತಿಭಟನೆಗೆ ಮುಂದಾದ ಬಳಿ ಇವತ್ತು ಕಳುಹಿಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು. ನಾವು ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಕೈಗೆತ್ತಿಕೊಂಡ ನಂತರ ಪರಿಶಿಷ್ಠರ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ತರಾತುರಿಯಲ್ಲಿ ಕಣ್ಣೊರೆಸುವ ತಂತ್ರಕ್ಕೆ ಮೊರೆ ಹೋಗಿದೆ. ಇದು ಬಿಜೆಪಿ ಕರ್ನಾಟಕದ ಕಿವಿ ಮೇಲೆ ಹೂ ಇಡುವ ಕೆಲಸ ಎಂಬುದು ಸ್ಪಷ್ಟ. ಇಲ್ಲಿಯವರೆಗೆ ಸುಮ್ಮನಿದ್ದು, ಈಗ ಪ್ರಸ್ತಾವನೆ ಸಲ್ಲಿಸುವುದು ಮೂಗಿಗೆ ತುಪ್ಪ ಸವರಲು ಮಾತ್ರ ಎಂದು ಕಾಂಗ್ರೆಸ್‌ ಕಿಡಿಕಾರಿದೆ.