ಮೀಸಲಾತಿ ವಿರೋಧಿಸಿ ಪ್ರತಿಭಟನೆ: ಬಿಎಸ್‌ವೈ ಮನೆ ಮೇಲೆ ಕಲ್ಲು ತೂರಾಟ

BSY
Advertisement

ಶಿವಮೊಗ್ಗ: ಸದಾಶಿವ ಆಯೋಗ ಜಾರಿಗೆ ಸಂಪುಟ ಅನುಮೋದನೆಗೆ ವಿರೋಧ ವ್ಯಕ್ತಪಡಿಸಿರುವ ಬಂಜಾರ, ಬೋವಿ ಸಮುದಾಯದ ಜನರು, ಶಿಕಾರಿಪುರದಲ್ಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸದ ಮುಂದೆ ಉಗ್ರ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ರೊಚ್ಚಿಗೆದ್ದ ಪ್ರತಿಭಟನಾಕಾರರು ಯಡಿಯೂರಪ್ಪನವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಯಡಿಯೂರಪ್ಪ ಅವರ ಮನೆಯ ಗಾಜುಗಳು ಒಡೆದು ಹಾಕಿದ್ದಾರೆ. ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಕೆಲವು ಪೊಲೀಸ್​ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಶಿಕಾರಿಪುರ ತಾಲೂಕು ಕಚೇರಿ ಎದುರು ಪ್ರತಿಭಟನೆ ಮುಂದುವರೆದಿದ್ದು, ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ರವಾನೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಿಕಾರಿಪುರ ತಹಶೀಲ್ದಾರ್​ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.