ದಾವಣಗೆರೆ: ಡಿಸೆಂಬರ್ 19 ರೊಳಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದುಕೊಂಡು ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಲು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳ್ಳವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಅಂತಿಮ ಗಡುವು ನೀಡಿದ್ದಾರೆ ಎಂದು ಕೂಡಲಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಬಾರಿ ಸರ್ಕಾರಕ್ಕೆ ನಾವೇ ಗಡುವು ನೀಡುತ್ತಿದ್ದೆವು. ಇದೀಗ ಸ್ವತಃ ಮುಖ್ಯಮಂತ್ರಿಗಳೇ ತಾವೇ ಅಂತಿಮ ಗುಡುವು ನೀಡಿ, ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೂ ಪೂರ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.
ಸರ್ಕಾರ ಎಷ್ಟೇ ಭರವಸೆ ನೀಡಿದರೂ ಕೂಡ ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಡಿ.19 ರೊಳಗೆ ಸರ್ಕಾರ ಮೀಸಲಾತಿ ಘೋಷಣೆ ಮಾಡಿದರೆ ಡಿ.22 ರಂದು ಬೆಳಗಾವಿಯ ಸುವರ್ಣಸೌಧ ಮುಂಭಾಗದ ಎದುರು ಸುಮಾರು 25 ಲಕ್ಷ ಪಂಚಮಸಾಲಿ ಬಂಧುಗಳನ್ನು ಸೇರಿಸಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಮುಖ್ಯಮಂತ್ರಿಗಳು ತಮ್ಮ ಮಾತಿಗೆ ತಪ್ಪಿದರೆ ಅನಿವಾರ್ಯವಾಗಿ ಅಭಿನಂದನಾ ಸಮಾರಂಭ ಬದಲಾಗಿ ವಿರಾಟ್ ಪಂಚಶಕ್ತಿ ಸಮಾವೇಶ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಂದಿನ ಕಾರ್ಯಕ್ರಮ ಅಭಿನಂದನಾ ಕಾರ್ಯಕ್ರಮವಾಗಬೇಕೇ ಅಥವಾ ಹೋರಾಟದ ಸಮಾವೇಶ ಆಗಬೇಕೇ ಎಂಬುದನ್ನು ಸರ್ಕಾರವೇ ನಿರ್ಧರಿಸಬೇಕೆಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.