ಅದೊಂದು ರಸ್ತೆ ಅಪಘಾತ. ಇಡೀ ದೇಶದ ಅಷ್ಟೇ ಅಲ್ಲ, ವಿಶ್ವದ ಉದ್ಯಮ ರಂಗದ ಆಘಾತ ಹಾಗೂ ಕಾಳಜಿ ಈ ಅಪಘಾತದ ಬಗ್ಗೆ ವ್ಯಕ್ತವಾಗಿದೆ.
ಖ್ಯಾತ ಉದ್ಯಮಿ ಹಾಗೂ ಟಾಟಾ ಸಂಸ್ಥೆಯ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಹಾಗೂ ಅವರ ಸ್ನೇಹಿತ ಜಹಾಂಗೀರ ಪಂಡೋಲೆ ಇಬ್ಬರೂ ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ಹೆದ್ದಾರಿಯಲ್ಲಿ ಸಂಭವಿಸಿದ ಕಾರು ದುರಂತದಲ್ಲಿ ಸಾವನ್ನಪ್ಪಿದರು. ಈ ದುರ್ಮರಣ ದೇಶ ವಿದೇಶದ ಉದ್ಯಮ ಪತಿಗಳ ಆಘಾತಕ್ಕೆ ಕಾರಣವಾಯಿತು. ಎಲ್ಲರ ಸಾಂತ್ವನ ಹಾಗೂ ಕಳಕಳಿ ವ್ಯಕ್ತವಾಗತೊಡಗಿದವು. ಈಗ ದೇಶದ ರಸ್ತೆ ಸುರಕ್ಷತೆ, ವಾಹನ ಸಂರಕ್ಷಣೆ, ವಾಹನಗಳ ಗುಣಮಟ್ಟ, ದೇಶದ ಜನರ ಮನೋಭಾವ, ಮೋಟಾರು ವಾಹನ ಕಾಯ್ದೆ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಈಗ ಜಿಜ್ಞಾಸೆ ಆರಂಭವಾಗಿದೆ. ಹಾಗೇ ಇಲ್ಲಿಯ ಭ್ರಷ್ಟ ವ್ಯವಸ್ಥೆಯ ಕರಾಳ ಮುಖದ ಹಲವು ಮಗ್ಗಲುಗಳನ್ನು ಅನಾವರಣಗೊಳಿಸಿದೆ.
ಸೈರಸ್ ಮಿಸ್ತ್ರಿ ಪ್ರಯಾಣಿಸುತ್ತಿದ್ದ ಕಾರು ಜಗತ್ತಿನಲ್ಲೇ ಅತ್ಯತೃಷ್ಟ ದರ್ಜೆಯ ಮರ್ಸಿಡಿಸ್. ಅಪಘಾತದ ವೇಳೆ ಪ್ರಯಾಣಿಕರ ಸುರಕ್ಷತೆಗೆ ಈ ದುಬಾರಿ ಕಾರು ವಿನ್ಯಾಸಗೊಂಡಿರುವುದು ಶ್ರೇಷ್ಟತೆ. ಈಗ ಸೇತುವೆಯ ಪಕ್ಕ ಹೊಡೆದ ಮರ್ಸಿಡಿಸ್ ಕಾರು ಒಳಗೆ ಕುಳಿತ ಮೀಸ್ತ್ರಿ ಹಾಗೂ ಪಂಡೋರೆ ಜೀವ ಹೋದದ್ದು ಮರ್ಸಿಡಿಸ್ ವಿಶ್ವಾಸಾರ್ಹತೆ ಹಾಗೂ ದೇಶದ ರಸ್ತೆಗಳ ಗುಣಮಟ್ಟದ ಬಗ್ಗೆಯೂ ವ್ಯಾಪಕ ಚರ್ಚೆ ಆರಂಭವಾಗಿದೆ.
ಇಷ್ಟಕ್ಕೂ ಅಪಘಾತ, ವಿಶೇಷವಾಗಿ ರಸ್ತೆ ಅಪಘಾತ ಅದೂ ಭಾರತದಲ್ಲಿ ಸರ್ವೇಸಾಮಾನ್ಯ. ಸರ್ಕಾರವೇ ಬಿಚ್ಚಿಟ್ಟಿರುವ ಅಂಕಿಸಂಖ್ಯೆಗಳ ಪ್ರಕಾರ ಕಳೆದ ವರ್ಷವೊಂದರಲ್ಲೇ ೧.೭೩ ಲಕ್ಷ ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ೪.೨೨ ಲಕ್ಷ ರಸ್ತೆ ಅಪಘಾತಗಳು ಸಂಭವಿಸಿವೆ. ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನರ ಬದುಕಿನಲ್ಲಿ ಈ ಅಪಘಾತಗಳು ಅಂಗವೈಕಲ್ಯ, ಗಾಯ, ಆಘಾತ ಉಂಟುಮಾಡಿವೆ. ನಾಲ್ಕು ಲಕ್ಷಕ್ಕೂ ಅಧಿಕ ಜನ ಬದುಕಿದ್ದರೂ ಸತ್ತಂತಿರುವ ಸ್ಥಿತಿಯಲ್ಲಿ ನರಳುತ್ತಿದ್ದಾರೆ. ಸರ್ಕಾರವೇ ಘೋಷಿಸಿರುವ ಪ್ರಕಾರ ೧೨.೬೭ ಲಕ್ಷ ಕೋಟಿ ರೂಪಾಯಿ, ಅಂದರೆ ಭಾರತದ ೭.೧ರಷ್ಟು ಜಿಡಿಪಿಗೆ ಸಮನಾಗಿ ನಷ್ಟ ಸಂಭವಿಸಿದೆ!
ದೊಡ್ಡವರ ಸಾವಿಗೆ ತಲ್ಲಣ ಆಘಾತ ಸಹಜ. ಆದರೆ ಪ್ರಶ್ನೆ ಇರುವುದು ಲಕ್ಷಾಂತರ ಜನರದ್ದು… ಅಂದರೆ ನಿಮಿಷಕ್ಕೊಂದು ಅಪಘಾತ ಸಂಭಿಸುವ ದೇಶದಲ್ಲಿ ನರಳುವ ಅಮಾಯಕರದ್ದು. ಮಿಸ್ತ್ರಿ ಸಾವು ನಿಜಕ್ಕೂ ಉದ್ಯಮ ರಂಗಕ್ಕಾದ ಆಘಾತವೇ. ಆದರೆ ೧.೭೩ ಲಕ್ಷ ಜನ ಒಂದು ವರ್ಷದಲ್ಲಿ ಇಂತಹದೇ ದುರಂತದಲ್ಲಿ ಜೀವ ಕಳೆದುಕೊಂಡರಲ್ಲ, ಇಂತಹ ದುರಂತ ಇನ್ನೂ ಅನಿಯಂತ್ರಿತವಾಗಿ ಮುಂದುವರಿಯುತ್ತಿದೆಯಲ್ಲ, ಇದಕ್ಕ್ಯಾರು ಹೊಣೆ? ಜನಸಾಮಾನ್ಯರ ಜೀವ ಅವರ ಕುಟುಂಬದ ಅವಲಂಬಿತರಿಗೆ ಅತ್ಯಂತ ಮಹತ್ವಲ್ಲವೇ? ಇದು ಜನಸಾಮಾನ್ಯರ ಚಿಂತನೆ…
ದುಡಿಯುವ ಕೈಗಳನ್ನು, ಪೋಷಿಸುವ ಮನಸ್ಸನ್ನು, ಅವಲಂಬಿತರ ನೆಮ್ಮದಿ ಬದುಕನ್ನು ಯಾವುದೋ ರಸ್ತೆ ಅಥವಾ ವಾಹನ ಕಸಿದುಕೊಳ್ಳುವುದರಷ್ಟು ಕ್ರೂರ ಇನ್ಯಾವುದೂ ಇಲ್ಲ. ಅಪಘಾತದಿಂದಾಗಿ ಕೋಟ್ಯಂತರ ಜೀವಗಳ ಬದುಕಿನ ದೋಣಿಯೇ ಹೊಯ್ದಾಟಕ್ಕೆ ಸಿಲುಕಿದೆ. ಹಾಗಂತ ಈ ದೇಶದಲ್ಲಿ ಸಂಚಾರ ಸುಭದ್ರತೆಗೆ ಕಾನೂನು ಇಲ್ಲವೇ? ನೀತಿ ನಿಯಮಗಳಿಲ್ಲವೇ? ವ್ಯವಸ್ಥಿತ ಸಂಚಾರ ಕಾಯ್ದೆ ಇಲ್ಲವೇ? ಎಲ್ಲವೂ ಇದೆ. ಆದರೆ ಎಲ್ಲವೂ ಪುಸ್ತಕದ ಬದನೇಕಾಯಿಯಷ್ಟೇ.
ಮಿಸ್ತ್ರಿ ಕಾರು ಅಪಘಾತ ಹಾಗೂ ಸಾವಿಗೆ ಎರಡು ಕಾರಣಗಳನ್ನು ಈಗ ತಜ್ಞರು ನೀಡುತ್ತಿದ್ದಾರೆ. ಒಂದು ಅವೈಜ್ಞಾನಿಕ ರಸ್ತೆ. ಎರಡು, ಹಿಂಬದಿಗೆ ಕುಳಿತುಕೊಂಡಿರೂ ಅವರು ಸೀಟ್ ಬೆಲ್ಟ್ ಹಾಕಿರಲಿಲ್ಲ ಎಂಬುದು. ಸೀಟ್ ಬೆಲ್ಟ್ ಕಡ್ಡಾಯ ಎಂಬ ಕಾಯ್ದೆ ಬಂದು ಹತ್ತಾರು ವರ್ಷಗಳಾಗಿವೆ. ಮರ್ಸಿಡಿಸ್ ಕಂಪನಿ ಕೂಡ ಕಾರಿನ ಹಿಂಭಾಗದ ಪ್ರಯಾಣಿಕರಿಗೆಂದು ಸೀಟ್ ಬೆಲ್ಟ್ ಅಳವಡಿಸಿದೆ. ಟಾಟಾ ಸಮೂಹ ಮುನ್ನಡೆಸಿದ, ಅವರದ್ದೆ ಕಂಪನಿ ಲಕ್ಷಾಂತರ ಕಾರುಗಳನ್ನು ಉತ್ಪಾದಿಸಿದ ಅವರು ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕೆಂಬ ಷರತ್ತು ಹಾಗೂ ಸುರಕ್ಷತೆಯ ಕಾಳಜಿ ಇರಲಿಲ್ಲವೇ? ಇಂಥವರೇ ನಿಯಮ ಉಲ್ಲಂಘಿಸಿದರೆ ಆಗುವ ಅವಘಡಗಳಿಗೆ ಹೊಣೆ ಯಾರು? ಎರಡನೆಯದ್ದು ರಸ್ತೆ ಸುರಕ್ಷತೆಯ ವಿಷಯ. ಪ್ರಶ್ನೆ ಮೇಸ್ತ್ರಿಯೊಬ್ಬರಲ್ಲ. ನಿತ್ಯ ಸಾವಿರಾರು ಅಮಾಯಕರು ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ವಿಶೇಷವಾಗಿ ರಸ್ತೆಯ ಮೇಲೆ ಪ್ರಾಣ ಕಳೆದುಕೊಳ್ಳುತ್ತಿರುವ ೧೮ರಿಂದ ೪೫ರ ಒಳಗಿನ ಯುವಕರು, ಪ್ರತಿಭಾನ್ವಿತರು, ಭವಿಷ್ಯದ ಭರವಸೆದಾರರ ಕಾಳಜಿ ಕಳಕಳಿ ಪ್ರಶ್ನೆ. ಇತ್ತೀಚೆಗೆ ತುಮಕೂರು, ಧಾರವಾಡ, ಯಾದಗಿರಿ ಮೊದಲಾದೆಡೆ ಅಪಘಾತಗಳು ಸಂಭವಿಸಿವೆ. ಅದೂ ಹೆದ್ದಾರಿಯ ಮೇಲೆ. ಸತ್ತವರೆಲ್ಲ ಕೂಲಿ ಕಾರ್ಮಿಕರು. ಜೀವನ ನಿರ್ವಹಣೆಗಾಗಿ ಕೂಲಿ ಅರೆಸಿಯೋ, ಹೊಟ್ಟೆ ತುಂಬಿಕೊಳ್ಳಲೋ ದುಡಿಮೆಗಾಗಿ ವಲಸೆ ತೆರಳುತ್ತಿವರು. ಸರ್ಕಾರಿ ಬಸ್ಸಿನ ದರ ತೆರಲೂ ಆಗದ ಬಡಜನ ಟೆಂಪೊ, ಜೀಪು, ಬಸ್ಸು, ಕಾರುಗಳಲ್ಲಿ ಪ್ರಯಾಣಿಸುವ ಇವರು ಯಾರದ್ದೋ ಕಾರಣಕ್ಕೆ ಜೀವ ಕಳೆದುಕೊಂಡರು. ಅಧಿಕಾರಿಗಳೋ ಒಂದೆರಡು ದಿನ ಓಡಾಡಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತೆಪ್ಪಗಾಗುತ್ತಾರೆ. ವಿಮಾ ಕಂಪನಿಗಳು ಓಡಾಡಿಸಿ ಅಲ್ಪಸ್ವಲ್ಪ ಪರಿಹಾರಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಬಂಧುಗಳು ಕೆಲ ದಿನ ಸಾಂತ್ವನಕ್ಕೆ ನಿಲ್ಲುತ್ತಾರೆ. ನಂತರ ವಿಧಿಲೀಲೆ ಎಂದು ಬದುಕಿನ ಬಂಡಿಯನ್ನು ಹಳಿ ಮೇಲೆ ತರಲು ಎಲ್ಲರೂ ಮುಂದಾಗುತ್ತಾರೆ. ಅಂಗಾಂಗ ಊನರಾದವರು ಮಾತ್ರ ಜೀವನ ಪರ್ಯಂತ ನರಳುತ್ತಿರುತ್ತಾರೆ. ಕಳೆದ ವರ್ಷ ಸಂಭವಿಸಿರುವ ನಾಲ್ಕೂವರೆ ಲಕ್ಷ ಅಪಘಾತಗಳಲ್ಲಿ ಶೇ ೯೯ರಷ್ಟು ಇದೇ ಕಥೆ. ದೊಡ್ಡವರು ಸತ್ತಾಗ ಕಣ್ಣೀರು ಹಾಕುವ, ಸಂತಾಪ ವ್ಯಕ್ತಪಡಿಸುವ ಮಂದಿ ಅಮಾಯಕರ ಜೀವಕ್ಕೆ ಬೆಲೆ ಕಟ್ಟಲ್ಲ. ಅದರ ಮೌಲ್ಯವನ್ನು ಅರ್ಥ ಮಾಡಿಕೊಳ್ಳಲ್ಲ. ರಸ್ತೆ ಅಪಘಾತಗಳಿಗೆ ತಂತ್ರಜ್ಞರು ಹತ್ತಾರು ಕಾರಣಗಳನ್ನು ನೀಡುತ್ತಾರೆ. ಸಂಚಾರ ನಿಯಮ ಪಾಲನೆ ಇಲ್ಲ. ಸುರಕ್ಷತಾ ವಿಧಾನಗಳಿಲ್ಲ ಇತ್ಯಾದಿ ಇತ್ಯಾದಿ. ಹೆಲ್ಮೆಟ್, ಸೀಟ್ ಬೆಲ್ಟ್, ಪರವಾನಿಗೆ ಇಷ್ಟೇ ಪ್ರಯಾಣಿಕರು, ಕಟ್ಟುನಿಟ್ಟಿನ ಷರತ್ತುಗಳನ್ನು ಪಾಲಿಸುವುದು ಇವೆಲ್ಲವೂ ಸ್ವಾತಂತ್ರ‍್ಯಾನಂತರ ಟೀಕೆ, ವ್ಯವಸ್ಥೆಯ ದೋಷದ ಬಗ್ಗೆ ಮಾತಿನ ವಸ್ತುವಾಗಿಬಿಟ್ಟಿವೆ. ಎಷ್ಟು ಅಪಘಾತ ಸಂಭವಿಸಿದರೂ, ಸುರಕ್ಷತೆ ಬಗ್ಗೆ ಜಾಗೃತಿ, ದಂಡ ಎಲ್ಲ ಇರೂ
ಅಯ್ಯೋ ಯಾರು ಕೇಳ್ತರ‍್ರೀ, ಏನೂ ಆಗಲ್ಲ ಎನ್ನುವ ಉಡಾಫೆಯ ವರ್ತನೆ ಒಂದೆಡೆಯಾದರೆ, ಇದು ಭಾರತ ಕೇಳರ‍್ಯಾರು, ಚಲ್ತಾ ಹೈ ಎನ್ನುವ ಧೋರಣೆ.
ಒಂದು ಉದಾಹರಣೆ ನೋಡಿ, ಕುಡಿದು ವಾಹನ ಚಲಾಯಿಸುವುದು ಹೆಚ್ಚಾಗಿರುವುದರಿಂದ ಹೆದ್ದಾರಿ ಅಕ್ಕಪಕ್ಕ ತಲೆ ಎತ್ತಿ ಮದ್ಯದಂಗಡಿ, ಬಾರ್‌ಗಳನ್ನು ಬಂದ್ ಮಾಡುವಂತೆ ಖಡಕ್ ನಿರ್ದೇಶನ ನೀಡಿತ್ತು…. ಮದ್ಯದ ಲಾಬಿ ತಿಣಿಕಾಡಿದರೂ ಸಡಿಲಗೊಳಿಸಲಿಲ್ಲ… ಆದರೆ, ಈಗ ನೋಡಿ ಹಲವು ನೆಪ, ತಂತ್ರ ಅನುಸರಿಸಿ ಮತ್ತೆ ಬಾರ್, ದಾಬಾ, ಎಲ್ಲವೂ ತಲೆ ಎತ್ತಿವೆ! ಸಂಚಾರ ನಿಯಮಗಳ ಉಲ್ಲಂಘನೆಯೇ ಸಾಹಸ, ಶ್ರೇಷ್ಠತೆ ಎನ್ನುವ ಮನೋಭಾವ ಇರುವವರ ಮುಂದೆ ಅನ್ಯರ ಜೀವ ಬಿಡಿ, ಅವರ ಜೀವವೂ ಅಗ್ಗವಾಗಿಬಿಟ್ಟಿದೆ!
ಇತ್ತೀಚೆಗೆ ಸಮೀಕ್ಷೆಯ ಪ್ರಕಾರ, ಅತ್ಯುತ್ತಮ ರಸ್ತೆಗಳಲ್ಲೇ ಅಪಘಾತಗಳು ಹೆಚ್ಚುತ್ತಿವೆ. ಕಾರಣ, ನಿಯಂತ್ರಣವಿಲ್ಲದ ವೇಗ. ಇನ್ನು, ಉದ್ದಕ್ಕೂ ಜನ ಜಾನುವಾರು, ಸಿಂಗಲ್ ರೋಡ್ ಇವುಗಳಿಂದ ಸಂಭವಿಸುವ ಅಪಘಾತಗಳೆಲ್ಲವೂ ವ್ಯವಸ್ಥೆಯ, ಸರ್ಕಾರಿ ಯಂತ್ರದ ದೋಷ. ಎಲ್ಲವನ್ನೂ ಸರಿಪಡಿಸುವ ತಂತ್ರಜ್ಞಾನ ಗೊತ್ತಿದ್ದೂ, ಹಾಗೇ ಮುಂದುವರಿಸಿಕೊಂಡು ಹೋಗುವ ನಿರ್ಲಕ್ಷ್ಯ ನಮ್ಮಲ್ಲಿ ಎದ್ದು ಕಾಣುವ ಲೋಪ.
ದುರಂತ ಎಂದರೆ ಬಹುತೇಕ ಅಪಘಾತಗಳಲ್ಲಿ ಸಾವನ್ನಪ್ಪಿದವರು ನಗರ ಪ್ರದೇಶದ ಶೇಕಡಾ ೫೦ರಷ್ಟು ಪಾದಚಾರಿಗಳೇ. ಬೆಂಗಳೂರಿನಲ್ಲಿ ಒಂದು ವರ್ಷಕ್ಕೆ ೯೧೨ರಷ್ಟು ಜನ ಅಪಘಾತಗಳಲ್ಲೇ ಸಾಯುತ್ತಿದ್ದಾರೆ. ಅಂದರೆ ಬೆಂಗಳೂರು ನಗರದಲ್ಲಿ ಸರಾಸರಿ ಮೂವರ ಜೀವವನ್ನು ಬೆಂಗಳೂರು ಟ್ರಾಫಿಕ್ ಬಲಿಪಡೆಯುತ್ತಿದೆ. ಹೆದ್ದಾರಿಗಳು ಕರ್ನಾಟಕದಲ್ಲಿಯೇ ೧೦ ಸಾವಿರಕ್ಕೂ ಹೆಚ್ಚು ಅಪಘಾತಗಳನ್ನು ಕಾಣುತ್ತವೆ.
ಒಬ್ಬರ ವಿರುದ್ಧ ಇನ್ನೊಬ್ಬರು ಬೆರಳು ತೋರುವ ಸ್ಥಿತಿಯಿಂದಾಗಿ ಗಂಟೆ ಕಟ್ಟದ ಬೆಕ್ಕಿನ ಕಥೆಯಾಗಿದೆ. ವಾಹನ ಚಾಲನೆ ಪರವಾನಗಿ ಮತ್ತು ಫಿಟ್‌ನೆಸ್ ಸರ್ಟಿಫಿಕೇಟ್ ಕೊಡುವ ವ್ಯವಸ್ಥೆಯ ಲೋಪವನ್ನು ಲೋಕೋಪಯೋಗಿ ಇಲಾಖೆಯವರು ಹೇಳಿದರೆ, ರಸ್ತೆಗಳನ್ನು ಸರಿಯಾಗಿ ಮಾಡದಿರುವುದೇ ಕಾರಣ ಎಂದು ಸಾರಿಗೆ ಇಲಾಖೆಯವರು ಬೆರಳು ತೋರುತ್ತಾರೆ. ನಾವೆಲ್ಲ ಕಾನೂನು ಕಟ್ಟಲೆ ರೂಪಿಸುತ್ತೇವೆ. ಪಾಲಿಸುವವರಿಲ್ಲ ಎನ್ನುತ್ತದೆ ಕಾನೂನು ಇಲಾಖೆ. ಪೊಲೀಸ್, ಟ್ರಾಫಿಕ್, ಆರ್‌ಟಿಓ ಭ್ರಷ್ಟಾಚಾರದ ಕೂಪಗಳಾಗಿರುವುದೇ ಕಾನೂನು ಹೆಸರಿನಲ್ಲಿ ಹಣ ಕೊಳ್ಳೆ ಹೊಡೆಯುವುದೇ ಕಾರಣ ಎನ್ನುವ ಆರೋಪ ಇನ್ನೊಂದೆಡೆಯಿಂದ ಕೇಳಿ ಬರುತ್ತಿದೆ.
ಒಬ್ಬರ ಮೇಲೋಬ್ಬರು ದೂಷಣೆ ಮಾಡುವುದು ನಡೆದೇ ಇದೆ. ತರಬೇತಿ ಇಲ್ಲದೇ ಚಾಲನೆ, ಮೊಬೈಲ್ ಬಳಸುತ್ತ ಚಾಲನೆ, ಮಾನಸಿಕ ಒತ್ತಡ ಎಲ್ಲವೂ ಅಪಘಾತಗಳಿಗೆ ಕಾರಣ ನಿಜ. ಆದರೆ ವಾಹನಗಳ ಹೆಚ್ಚಳಕ್ಕೆ ಅನುಗುಣವಾಗಿ ಮೂಲಸೌಕರ್ಯಗಳಿಲ್ಲ ಎನ್ನುವುದೂ ಸತ್ಯ.
ನಮ್ಮ ಸುರಕ್ಷತೆಗಾಗಿ ನಿಯಮ ಎನ್ನುವ ಪರಿಕಲ್ಪನೆ ನಮ್ಮಲ್ಲಿಲ್ಲ. ವಿದೇಶದಲ್ಲಿ ಮಧ್ಯರಾತ್ರಿ ವಾಹನ ಓಡಿಸುವಾಗ ರೆಡ್ ಸಿಗ್ನಲ್ ಬಂದರೂ ನಿಂತೇ ಪ್ರಯಾಣಿಸುತ್ತಾರೆ. ನಮ್ಮಲ್ಲಿ ವಿಶೇಷವಾಗಿ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈಗಳಲ್ಲಿ ಶೇಕಡಾ ೫೦ರಷ್ಟು ಸಾವು ನೋವು, ಅಪಘಾತಗಳು ಸಂಭವಿಸಿರುವುದು ಸಿಗ್ನಲ್ ಉಲ್ಲಂಘನೆಯಿಂದ.
ರಸ್ತೆ ದುರಂತದಲ್ಲಿ ಸಾವು ಯಾರಿಗೂ, ಯಾವತ್ತೂ ಬರಬಾರದು. ಕರ್ನಾಟಕದಲ್ಲಿ ೨೦೨೧-೨೨ರಲ್ಲಿ ೩೪೩೯೪ ಅಪಘಾತಗಳು ವರದಿಯಾಗಿವೆ. ೯೮೬೮ ಸಾವು ಸಂಭವಿಸಿವೆ. ೪೦೪೮೩ ಮಂದಿ ಗಾಯಗೊಂಡಿದ್ದಾರೆ. ಅಂದರೆ ಪ್ರತಿದಿನ ಸರಾಸರಿ ೯೪ ಅಪಘಾತ, ೨೭ ಸಾವುಗಳು ವರದಿಯಾಗಿವೆ. ಭಾರತೀಯ ವಿಜ್ಞಾನ ಸಂಸ್ಥೆ, ಸುಸ್ಥಿರ ಸಾರಿಗೆ ತಜ್ಞರ ವರದಿಯ ಪ್ರಕಾರ, ವಾಹನ ಉತ್ಪಾದನೆ, ಚಾಲನಾ ಪರವಾನಗಿ, ಜಾಗೃತ ಚಾಲಕರ ರೂಪಿಸುವಿಕೆ, ರಸ್ತೆ ಅಭಿವೃದ್ಧಿ ಮತ್ತು ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿ ಮಾತ್ರ ಇಂತಹ ಅಪಘಾತಗಳಿಗೆ ನಿಯಂತ್ರಣ ಹಾಕಬಲ್ಲದು. ಒಂದು ವರ್ಷದಲ್ಲಿ ಭಾರತದ ರಸ್ತೆ ಅಪಘಾತದಿಂದ ನಷ್ಟ ಉಂಟಾಗಿರುವುದು ೧೨.೯೦ ಲಕ್ಷ ಕೋಟಿ. ಇನ್ನು ವಾಹನಗಳು ಅಪಘಾತ ಸಂಭವಿಸಿದಾಗ ವಿಮೆ ಕಡ್ಡಾಯಗೊಳಿಸಲಾಗಿದೆ. ಬಹುಶಃ ಈ ವಿಮೆಯಿಲ್ಲದೇ ಓಡಾಡುತ್ತಿರುವ ವಾಹನಗಳ ಸಂಖ್ಯೆ ಶೇಕಡಾ ೨೫ರಷ್ಟು. ಈ ನಿಯಮದ ಕಠಿಣ ಪರಿಪಾಲನೇಯೇ ಇಲ್ಲ. ಇವನ್ನು ಗುರುತಿಸಿ ನಿಯಂತ್ರಿಸುವುದು ಇಂದಿನ ತಂತ್ರಜ್ಞಾನ ಯುಗದಲ್ಲಿ ಕಷ್ಟವೂ ಅಲ್ಲ. ವಿಮಾ ಕಂಪನಿಗಳು ಅಪಘಾತದಲ್ಲಿ ನೊಂದವರ ಗೋಳು ಹೊಯ್ದುಕೊಳ್ಳುವಷ್ಟು ಯಮಕಿಂಕರಿಂದಲೂ ಕಷ್ಟವಾಗುತ್ತಿಲ್ಲ. ವಾಹನ ವಿಮಾ ಕಂಪನಿಗಳ ಲಾಭ ಬೆಟ್ಟದಷ್ಟು ಬೆಳೆದಿವೆ. ಖಾಸಗಿಯವರ ಪ್ರವೇಶ ಈ ಕ್ಷೇತ್ರದಲ್ಲಾದ ಮೇಲೆ ಇನ್ನಷ್ಟು ಸಮಸ್ಯೆ ಉಂಟಾಗಿದೆ.
ಕೇಂದ್ರ ಹೆದ್ದಾರಿ ಸಚಿವ ನಿತೀನ್ ಗಡ್ಕರಿಯವರೇನೋ ಅಪಘಾತ ನಿಯಂತ್ರಣ ಮತ್ತು ಸುರಕ್ಷತೆಗೆ ಸಾಕಷ್ಟು ಮಹತ್ವ ನೀಡಿದ್ದಾರೆ. ಅನುಷ್ಟಾನ ಆಗುತ್ತಿಲ್ಲ. ವರ್ಷವೂ ಅಮಾಯಕರ ಜೀವ ಪಡೆಯುವ ಹುಬ್ಬಳ್ಳಿ-ಧಾರವಾಡದ ಬೈಪಾಸ್ ದೇಶದ ಪ್ರಪ್ರಥಮ ಬಿಓಟಿ ಬೈಪಾಸ್. ಇದನ್ನು ದಶಪಥ ಮಾಡುವ ಭರವಸೆಗೆ ಮೂರು ವರ್ಷಗಳ ಮೇಲಾದವು. ನಿತ್ಯ ಅಪಘಾತಗಳು ಇಲ್ಲಿ ಸಾಮಾನ್ಯ. ಹಲವು ರಿಂಗ್ ರೋಡ್, ಹೆದ್ದಾರಿ, ಎಕ್ಸ್ಪ್ರೆಸ್ ಕಥೆ ಇದುವೇ. ಗಡ್ಕರಿಯವರಿಗೇನೋ ಕಾಳಜಿ ಇದೆ. ಆದರೆ ಅವರ ವೇಗ, ಬದ್ಧತೆ ಎಲ್ಲರಿಗೂ ಬೇಕಲ್ಲ.
ಇಷ್ಟೆಲ್ಲ ಪ್ರಸ್ತಾಪಿಸಲು ಕಾರಣ ಮಿಸ್ತ್ರಿ ಸಾವು ಎಷ್ಟು ಪ್ರಮುಖವೋ ಅಷ್ಟೇ ಪ್ರಮುಖವಾಗಿ ಅಮಾಯಕರ ಸಾವೂ ಕೂಡ ಎಂಬುದು. ಎಲ್ಲರ ಜೀವಕ್ಕೂ ಬೆಲೆ, ಪ್ರಾಮುಖ್ಯತೆ ಅವರ ಅವಲಂಬಿತರಿಗಿದೆ. ಎಲ್ಲರ ಬಗ್ಗೆಯೂ ಕಾಳಜಿ ಸರ್ಕಾರಕ್ಕೆ ಬೇಕಲ್ಲವೇ?.