ವಿಶ್ವನಾಥ ಕೋಟಿ
ಧಾರವಾಡ: ಮನುಷ್ಯರು ರಕ್ತದಾನ ಮಾಡುತ್ತಾರೆ. ಅದರಲ್ಲೂ ಹಲವಾರು ಗ್ರ‍್ರೂಪ್‌ಗಳು. ಅಪರೂಪದ ಗ್ರ‍್ರೂಪ್‌ನ ರಕ್ತದಾನಿಗಳಿಗೆ ಎಲ್ಲಿಲ್ಲದ ಬೇಡಿಕೆ. ಈಗಂತೂ ರಕ್ತದಾನ ಜಾಗೃತಿ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ. ಆಪತ್ಕಾಲದಲ್ಲಿ ರಕ್ತದಾನಿಗಳಿಂದ ಅಸಂಖ್ಯಾತ ಜನರು ಮರು ಜೀವ ಪಡೆದಿದ್ದಾರೆ. ಪಡೆಯುತ್ತಿದ್ದಾರೆ.
ಆದರೆ, ಪ್ರಾಣಿಗಳಿಗೆ ರಕ್ತ ಕೊರತೆಯಾಗಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದರೆ ಹೇಗೆ? ಅವುಗಳಿಗೆ ರಕ್ತದಾನ ಮಾಡುವವರು ಯಾರು? ಪ್ರಾಣಿಗಳಿಗೆ ರಕ್ತದಾನ ಮಾಡುವಂತಹ ಪ್ರಾಣಿ ಚಿಕಿತ್ಸಾ ವ್ಯವಸ್ಥೆಯಲ್ಲಿ ಬೆಳವಣಿಗೆಯಾಗಿದೆಯಾ? ಇಷ್ಟಕ್ಕೂ ಪ್ರಾಣಿಗಳಿಗೆ ರಕ್ತದ ಕೊರತೆ ಆಗುತ್ತದೆಯೇ ಎಂಬ ಪ್ರಶ್ನೆಗಳು ಏಳುವುದು ಸಹಜ.
ಆದರೆ, ಭಾನುವಾರ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ ನಡೆದ ಘಟನೆ ಪ್ರಾಣಿಗಳಿಗೂ ರಕ್ತದ ಕೊರತೆ ಆಗುತ್ತದೆ. ಒಂದು ಪ್ರಾಣಿಗೆ ಇನ್ನೊಂದು ಪ್ರಾಣಿ ರಕ್ತದಾನ ಮಾಡಲು ಸಾಧ್ಯವಿದೆ ಎಂಬುದನ್ನು ಜಗಜ್ಜಾಹೀರು ಮಾಡಿತು! ಪಶು ವೈದ್ಯರು ನಡೆಸಿದ ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ರಕ್ತ ದಾನ ಪ್ರಕ್ರಿಯೆಯನ್ನು ನೂರಾರು ಜನರು ಕಣ್ಣಾರೆ ಕಂಡರು. ಅಬ್ಬಾ ಎಂದರು!
ಇಲ್ಲಿನ ಕೃಷಿ ಮೇಳಕ್ಕೆ ಬಂದಿದ್ದ ಶ್ವಾನವೊಂದು ಅನಾರೋಗ್ಯಕ್ಕೀಡಾಗಿದ್ದರಿಂದ ಇನ್ನೊಂದು ಶ್ವಾನದಿಂದ ರಕ್ತದಾನ ಮಾಡಿಸಿ ಚಿಕಿತ್ಸೆ ನೀಡಿದ ಅಪರೂಪದ ಘಟನೆ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾಲಯದಲ್ಲಿ ನಡೆಯಿತು.
ಡಾಗ್ ಸ್ಕ್ವಾಡ್‌ನ ಮಾಯಾ ಎಂಬ ನಾಯಿ ಅನಾರೋಗ್ಯಕ್ಕೀಡಾಗಿತ್ತು. ಅದಕ್ಕೆ ರಕ್ತದ ಅವಶ್ಯಕತೆಯಿತ್ತು. ಆಗ ರೆಸ್ಕ್ಯೂ ತಂಡದ ಜರ್ಮನ್ ಶೆಫರ್ಡ್ ನಾಯಿ “ಚಾರ್ಲಿ’ಯಿಂದ ರಕ್ತ ಪಡೆದು ಮಾಯಾಗೆ ರಕ್ತ ಕೊಡಿಸಲಾಯಿತು. ಪಶು ಚಿಕಿತ್ಸಾಲಯದ ಡಾ.ಅನಿಲ ಪಾಟೀಲ ಸಿಬ್ಬಂದಿ ರಕ್ತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದರು. ನಂತರ ಮಾಯಾ ಚೇತರಿಸಿಕೊಂಡಿತು. ಚಾರ್ಲಿ ರಕ್ತದಾನ ಮಾಡುತ್ತಿರುವುದು ಇದು ೨ನೇ ಬಾರಿ. ಹಿಂದೆ ಅಪಘಾತಕ್ಕೀಡಾದ ನಾಯಿಯೊಂದಕ್ಕೆ ರಕ್ತ ನೀಡಿತ್ತು ಎನ್ನಲಾಗಿದೆ.